ಕರ್ನಾಟಕ

karnataka

ETV Bharat / state

ವಿಶೇಷ ಚೇತನರಿಗೆ ಬಿಎಸ್​ವೈ ಕೊಟ್ರು ವಿಶೇಷ ಉಡುಗೊರೆ

ಇಂದು ಸಿಎಂ ಬಿ.ಎಸ್​.ಯಡಿಯೂರಪ್ಪನವರು ಬಹು ನಿರೀಕ್ಷಿತ ಬಜೆಟ್​​ ಮಂಡಿಸಿದ್ದು, ವಿಶೇಷ ಚೇತನರಿಗೆ ಬಜೆಟ್​ನಲ್ಲಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

ಬಿ.ಎಸ್​.ಯಡಿಯೂರಪ್ಪ
cm yadiyurappa

By

Published : Mar 5, 2020, 5:19 PM IST

ಬೆಂಗಳೂರು:ಇಂದು ಸಿಎಂ ಬಿ.ಎಸ್​.ಯಡಿಯೂರಪ್ಪನವರು ಬಹು ನಿರೀಕ್ಷಿತ ಬಜೆಟ್​​ ಮಂಡಿಸಿದ್ದು, ವಿಶೇಷ ಚೇತನರಿಗೆ ಬಜೆಟ್​ನಲ್ಲಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

ಈ ಬಾರಿಯ ಬಜೆಟ್​ ಮೇಲೆ ರಾಜ್ಯದ ಜನತೆ ಹೊಂಡಿದ್ದ ನಿರೀಕ್ಷಗಳ ಪೂರೈಕೆಗೆ ಸಿಎಂ ಸಾಕಷ್ಟು ಪ್ರಯತ್ನಿಸಿದ್ದು, ಎಲ್ಲಾ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನು ಸಮಾಜದಲ್ಲಿನ ವಿಶೇಷ ಚೇತನರಿಗೆ ಬಜೆಟ್​ನಲ್ಲಿ ಅನುದಾನ ಮೀಸಲಿದ್ದು, ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲು ಸರ್ಕಾರವು 60 ಲಕ್ಷ ರೂ. ಅನುದಾನ ಒದಗಿಸಲಿದೆ. ಇವರಿಗೆ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಬ್ರೈಲ್ ಕಂ ಟಾಕಿಂಗ್ ಲೈಬ್ರರಿಯನ್ನು 30 ಲಕ್ಷ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಮೈಸೂರಿನಲ್ಲಿರುವ ಸರ್ಕಾರಿ ಬ್ರೈಲ್ ಮುದ್ರಣಾಲಯಕ್ಕೆ 80 ಲಕ್ಷ ರೂ.ಗಳ ವೆಚ್ಚದಲ್ಲಿ ಒಂದು ಆಧುನಿಕ ಮುದ್ರಣ ಯಂತ್ರವನ್ನು ಖರೀದಿಗೆ ನಿರ್ಧರಿಸಲಾಗಿದೆ.

ಅಂಧ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ರಾಜ್ಯದ 500 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತು ಇನ್ನಿತರೆ ಸಾಧನಗಳನ್ನು ಒಳಗೊಂಡ ತಲಾ 25,000 ರೂ.ಗಳ ಕಿಟ್‍ಗಳನ್ನು ವಿತರಿಸಲಾಗುವುದು. ಈ ಉದ್ದೇಶಕ್ಕಾಗಿ 1.25 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಅಂಧ ತಾಯಂದಿರಿಗೆ ಮಾಸಿಕ 2000 ರೂ.ಗಳಂತೆ ಶಿಶುಪಾಲನಾ ಭತ್ಯೆಯನ್ನು ರಾಜ್ಯ ಸರ್ಕಾರವು ಮಗುವಿನ ಮೊದಲ ಎರಡು ವರ್ಷದವರೆಗೆ ನೀಡುತ್ತಿದೆ. ಈ ಭತ್ಯೆಯನ್ನು ಮಕ್ಕಳ ಮೊದಲ ಐದು ವರ್ಷದವರೆಗೆ ನೀಡಲಾಗುವುದು.

ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ 'ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ' ಯೋಜನೆಯಡಿಯಲ್ಲಿ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ 'ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್​'ಗಳನ್ನು ವಿತರಿಸಲಾಗುವುದು.

ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ “ವನಿತಾ ಸಂಗಾತಿ” ಯೋಜನೆಯಡಿ ಮಾಸಿಕ ಬಸ್ ಪಾಸ್‍ಗಳನ್ನು ಕಾರ್ಖಾನೆಯ ಮಾಲೀಕರು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ಒದಗಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 2020-21ನೇ ಸಾಲಿನಲ್ಲಿ 25 ಕೋಟಿ ರೂ. ಮೊತ್ತದ ಅನುದಾನವನ್ನು ಮೀಸಲಿಡಲಾಗಿದೆ.

ನಗರ ಪ್ರದೇಶಗಳಲ್ಲಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ರಕ್ಷಣೆ ನೀಡುವ ದೃಷ್ಟಿಯಿಂದ 10 “ಮೊಬೈಲ್ ಕ್ಲಿನಿಕ್”ಗಳನ್ನು ಪ್ರಾರಂಭಿಸಲಾಗುವುದು.

ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಆರು ವರ್ಷದೊಳಗಿನ ಮಕ್ಕಳ ಪಾಲನೆ ಪೋಷಣೆ ಮಾಡಲು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ 10 ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 110 “ಕಿತ್ತೂರು ರಾಣಿ ಚೆನ್ನಮ್ಮ” ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ABOUT THE AUTHOR

...view details