ಬೆಂಗಳೂರು: ಸಿಎಂ ಯಡಿಯೂರಪ್ಪ ನಾಳೆ ತಮ್ಮ ಎಂಟನೇ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆ ಮಂಡನೆ ಮಾಡಲಾಗುತ್ತಿರುವ ಬಜೆಟ್‌ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆ ಬಹುತೇಕ ಅನುಮಾನವಾಗಿದ್ದು, ಸರಳ, ತೆರಿಗೆ ಹೊರೆ ಇಲ್ಲದ ಇತಿಮಿತಿಯ ಆಯವ್ಯಯವಾಗಿರಲಿದೆ ಎಂಬ ಸುಳಿವನ್ನು ಅಧಿಕಾರಿಗಳು ನೀಡಿದ್ದಾರೆ.
2021-22 ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡನೆ ಮಾಡಲಿರುವ ಸಿಎಂ ಯಡಿಯೂರಪ್ಪಗೆ ಆರ್ಥಿಕ ಸಂಕಷ್ಟ, ಆದಾಯ ಕೊರತೆ ಮಧ್ಯೆ ಜನರಿಗೆ ಹೆಚ್ಚಿನ ಹೊರೆ ಇಲ್ಲದ, ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ. ಈಗಾಗಲೇ ಸಿಎಂ ಕೊರತೆಯ ಬಜೆಟ್ ಮಂಡನೆಯಾಗುವುದಿಲ್ಲ ಎಂದಿದ್ದಾರೆ. ಆದರೆ ಆದಾಯ ಕೊರತೆ ಇದ್ದರೂ ಕಳೆದ ಬಾರಿಯ ಬಜೆಟ್ಗಿಂತ ಈ ಬಾರಿ ಬಜೆಟ್ ಗಾತ್ರ ಸ್ವಲ್ಪ ದೊಡ್ಡದಾಗಿರಲಿದೆ ಎಂಬ ಸುಳಿವು ನೀಡಿದ್ದಾರೆ. ವೆಚ್ಚ ಕಡಿತದೊಂದಿಗೆ ಆದ್ಯತಾ ವಲಯಕ್ಕೆ ಹೆಚ್ಚಿನ ಒತ್ತು ನೀಡುವ ಇತಿಮಿತಿಯ ಬಜೆಟ್ ಇರಲಿದೆ ಎಂದು ಹೇಳಲಾಗಿದೆ.
ಎಲ್ಲೆಲ್ಲಿ ತೆರಿಗೆ ಹೆಚ್ಚಳ ಸಾಧ್ಯತೆ:
ಈಗಾಗಲೇ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಸಿಎಂ ಯಡಿಯೂರಪ್ಪಗೆ ಜನರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹಾಕದಿರುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಬಜೆಟ್‌ನಲ್ಲಿ ತೆರಿಗೆ ಹೊರೆ ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ.ಸಾಮಾನ್ಯವಾಗಿ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ವಿಧಿಸುವ ಮೂಲಕ ಆದಾಯ ಕ್ರೋಢೀಕರಣಕ್ಕೆ ಬಜೆಟ್‌ನಲ್ಲಿ ಕೈ ಹಾಕಲಾಗುತ್ತದೆ. ಆದರೆ ಈಗಾಗಲೇ ಪೆಟ್ರೋಲ್ ಉತ್ಪನ್ನಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಈ ಹಿನ್ನೆಲೆ ಪೆಟ್ರೋಲ್, ಡೀಸೆಲ್ ಮೇಲೆ ಮತ್ತೆ ತೆರಿಗೆ ಹೆಚ್ಚಿಸುವ ಪರಿಸ್ಥಿತಿಯಲ್ಲಿ ಸಿಎಂ ಇಲ್ಲ. ಹೀಗಾಗಿ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸುವ ಆಯ್ಕೆಯನ್ನು ಕೈ ಬಿಡಲಾಗಿದೆ. ಆದರೆ ಇರುವ ತೆರಿಗೆಯನ್ನು ಇಳಿಕೆ ಮಾಡದಿರಲು ನಿರ್ಧರಿಸಿದೆ. ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸುವ ಸಾಧ್ಯತೆ ಇದೆ. ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ತೆರಿಗೆ ಮೂಲ ಅಬಕಾರಿ ಸುಂಕ. ಆರ್ಥಿಕ ಸಂಕಷ್ಟದ ಮಧ್ಯೆ ಈ ಬಾರಿ ಸರ್ಕಾರದ ಕೈ ಹಿಡಿದಿರುವುದು ಅಬಕಾರಿ ತೆರಿಗೆನೇ. ಹೀಗಾಗಿ ಸೊರಗಿದ ಆದಾಯವನ್ನು ತುಂಬಿಸಲು ಪ್ರತಿಬಾರಿಯಂತೆ ಈ ಬಜೆಟ್ನಲ್ಲೂ ಅಬಕಾರಿ ಸುಂಕ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇತರ ತೆರಿಗೆ ಮೂಲಗಳಾದ ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುಂದ್ರಾಂಕ ಶುಲ್ಕ ಹೆಚ್ಚಿಸುವ ಸಾಧ್ಯತೆಯೂ ಕಡಿಮೆ ಇದೆ ಎನ್ನಲಾಗಿದೆ. ಎಲ್ಲಾ ಉತ್ಪನ್ನಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದರಿಂದ ಸರ್ಕಾರಕ್ಕೆ ತೆರಿಗೆ ವಿಧಿಸುವ ಅವಕಾಶ ಇಲ್ಲ.
ತೆರಿಗೆಯೇತರ ಆದಾಯಕ್ಕೆ ಹೆಚ್ಚಿನ ಆದ್ಯತೆ:
ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಸ್ವಂತ ತೆರಿಗೆ ಮೂಲಗಳ ಬದಲಾಗಿ ತೆರಿಗೆಯೇತರ ಆದಾಯ ಮೂಲವನ್ನೇ ಸರ್ಕಾರ ನೆಚ್ಚಿಕೊಳ್ಳಲಿದೆ. ಲಾಕ್ಡೌನ್ನಿಂದ ಎಲ್ಲಾ ಕ್ಷೇತ್ರಗಳು ನಿಧಾನವಾಗಿ ಚೇತರಿಕೆ ಕಾಣುತ್ತಿವೆ. ಪ್ರಮುಖವಾಗಿ ಸರ್ಕಾರಿ ಭೂಮಿಗಳನ್ನು ಹರಾಜು ಹಾಕಿ, ಆ ಮೂಲಕ ಆದಾಯ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ತೆರವಾಗಿರುವ ಒತ್ತುವರಿ ಸರ್ಕಾರಿ ಜಮೀನುಗಳನ್ನು ಹರಾಜು ಹಾಕುವ ಮೂಲಕ ಬೊಕ್ಕಸ ತುಂಬಿಸಲು ನಿರ್ಧರಿಸಲಾಗಿದೆ. ಸುಮಾರು 2.7 ಲಕ್ಷ ಎಕರೆ ಸರ್ಕಾರಿ ಒತ್ತುವರಿ ಜಮೀನನ್ನು ವಶಕ್ಕೆ ಪಡೆಯಲಾಗಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 16,148 ಎಕರೆ ಜಮೀನು ಇದೆ. ಜೊತೆಗೆ ಬಿಡಿಎ ಮೂಲೆ ನಿವೇಶನ ಹರಾಜು, ಬಿಡಿಎ ಬಡಾವಣೆಯಲ್ಲಿನ ಕಟ್ಟಡ ಅಕ್ರಮ ಸಕ್ರಮ, ಸಿಎ ನಿವೇಶನ ಮಾರಾಟವನ್ನು ಚುರುಕುಗೊಳಿಸಿ ಆದಾಯ ಸಂಗ್ರಹಕ್ಕೆ ಮುಂದಾಗಿದೆ.
ಪಿಪಿಪಿ ಮಾದರಿಗೆ ಮಣೆ ಹಾಕಲಿರುವ ಸರ್ಕಾರ:
ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವೂ ಖಾಸಗಿ ಪಾಲುದಾರಿಕೆಯ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ನಷ್ಟದಲ್ಲಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆ, ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಸಾಧ್ಯತೆ ಹೆಚ್ಚಿದೆ. ಖಾಸಗಿ ಪಾಲುದಾರಿಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರದ ಮೇಲೆ ಹೊರೆ ಕಡಿಮೆಗೊಳಿಸಿ, ಹೆಚ್ಚಿನ ಆದಾಯ ಕ್ರೋಢೀಕರಣ ಮಾಡುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಈ ಬಾರಿ ಪಿಪಿಪಿ ಮಾದರಿಯಡಿ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.