ಬೆಂಗಳೂರು: ಕನ್ನಡಿಗರು ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ವಿನಾಕಾರಣ ಕರೆಯುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತಾಂಧ ಟಿಪ್ಪುವನ್ನು ನುಗ್ಗಿಸಿ, ನಮ್ಮ ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟ ಪೆಡಂಭೂತದ ಜಯಂತಿಯನ್ನು ಸರಕಾರಿ ಆಚರಣೆಯಾಗಿ ತಂದವರು ಅವರು. ಇಂಥವರು ಸಿದ್ರಾಮುಲ್ಲಾ ಖಾನ್ ಅಲ್ಲದೇ ಇನ್ಯಾರು? ಎಂದು ಬಿಜೆಪಿ ತನ್ನ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಟೀಕಿಸುತ್ತಿರುವುದನ್ನು ಸಮರ್ಥಿಸಿಕೊಂಡು ಸರಣಿ ಟ್ವೀಟ್ ಮಾಡಿರುವ ಬಿಜೆಪಿ,
ತಮ್ಮವರನ್ನೇ ತುಳಿಯುವ ಸಿದ್ದರಾಮಯ್ಯರ ಮನಸ್ಥಿತಿ ಕಂಡು ದೇವೇಗೌಡರು ಅಂದೇ ಅವರನ್ನು ಪಕ್ಷದಿಂದ ಹೊರಹಾಕಿದರು. ಆಗ ಕಾಂಗ್ರೆಸ್ ಸೇರಲು ಬಲಪ್ರದರ್ಶನದ ಅಗತ್ಯ ಬಂತು. ಹಾಗಾಗಿ ಅಹಿಂದ ಎಂಬ ಏಣಿ ಕಟ್ಟಿ ನಂತರ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುಳಿದವರು ಮತ್ತು ದಲಿತರನ್ನು ಹತ್ತಿದ ಏಣಿ ತುಳಿಯುವಂತೆ ಎಡಗಾಲಲ್ಲಿ ತುಳಿದದ್ದನ್ನು ಜನ ಮರೆತಿಲ್ಲ ಎಂದು ಟೀಕಿಸಿದೆ.
ಕ್ಷಣವೂ ವಿವೇಚಿಸದೆ ತಲಾಖ್ ಎಂದು ಮಹಿಳೆಯರ ಬದುಕು ಬರ್ಬಾದ್ ಮಾಡುವ ಮನಸ್ಥಿತಿಯವರಿಗೆ ಬೆನ್ನುತಟ್ಟುವ ಶಾದಿ ಭಾಗ್ಯ ಕಲ್ಪಿಸಿದ್ದು ಸಿದ್ದರಾಮಯ್ಯ. ಕೇವಲ ಒಂದು ಸಮುದಾಯದ ಓಲೈಕೆ ಮಾಡಲು ಸೆಕ್ಯುಲರಿಸಂ ಹೆಸರಿನಲ್ಲೇ ತುಷ್ಟೀಕರಣಕ್ಕಿಳಿದಿರಿ. ಇಂಥವರನ್ನು ಸಿದ್ರಾಮುಲ್ಲಾ ಖಾನ್ ಎನ್ನದೆ ಮತ್ತೇನೆಂದು ಕರೆದಾರು? ದೇಶಾದ್ಯಂತ ಮತಾಂಧತೆಯನ್ನು ಪಸರಿಸುತ್ತಾ ಅಲ್ಲಲ್ಲಿ ಭಯೋತ್ಪಾದಕ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಪಿಎಫ್‌ಐನ 175 ಗೂಂಡಾಗಳ ಮೇಲಿದ್ದ ಕೇಸುಗಳನ್ನು ವಿಚಾರಣೆಯಿಲ್ಲದೆ ಹಿಂಪಡೆದದ್ದಕ್ಕಾಗಿ ವಿಚಾರವಾದಿ ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂಬ ಬಿರುದು ನಾವಲ್ಲ, ಜನರೇ ನೀಡಿದ್ದಾರೆ ಎಂದಿದೆ.