ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರಿಗೆ ಭಯೋತ್ಪಾದಕರೇ ಬ್ರದರ್ಸ್ ಎಂದು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಮೂಲಕ ಟೀಕಿಸಿದೆ. ಒಬ್ಬರು ಟಿಪ್ಪು ಪರ ಮತ್ತೊಬ್ಬರು ಉಗ್ರರ ಪರ. ಕಳೆದ 70 ವರ್ಷಗಳಿಂದ ಈ ರೀತಿಯ ಓಲೈಕೆ ರಾಜಕಾರಣ ಮಾಡಿದ್ದರಿಂದಲೇ ಇಂದು ದೇಶದಲ್ಲಿ ಕಾಂಗ್ರೆಸ್ಅನ್ನು ಹುಡುಕಬೇಕಾಗಿದೆ ಎಂದು ವ್ಯಂಗ್ಯವಾಡಿದೆ.
ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಟೂನ್ ಮೂಲಕ ಡಿಕೆಶಿ ಕುಕ್ಕರ್ ಬ್ಲಾಸ್ಟ್ ಸಂಬಂಧದ ಹೇಳಿಕೆಯನ್ನು ವಿಡಂಬನೆ ಮಾಡಿದೆ. ಕಾಂಗ್ರೆಸ್ ಮೊದಲೇ ಮಕಾಡೆ ಮಲಗಿದೆ. ಹೀಗೆ ಬಿಟ್ರೆ ಮುಸ್ಲಿಂ ವೋಟ್ ಬ್ಯಾಂಕ್ ಕಳಕೋಬೇಕಾಗುತ್ತದೆ ಎಂದು ಕಾರ್ಟೂನ್ ಮೂಲಕ ಡಿಕೆಶಿ ಹೇಳಿಕೆಯನ್ನು ಟೀಕಿಸಿದೆ.
ಅಲ್ಲದೇ ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ ಡಿಕೆಶಿ ಹೇಳಿಕೆ ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ಮುಂದಾಗಿದೆ. ಕುಕ್ಕರ್ ಬ್ಲಾಸ್ಟ್ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ನವರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಡಿಸೆಂಬರ್ 19, 20, 21 ರಂದು ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಮಾತನಾಡಿದ ಪರಿಷತ್ ಸದಸ್ಯ ಎನ್.ರವಿಕುಮಾರ್, ಭಯೋತ್ಪಾದಕರನ್ನ ರಕ್ಷಣೆ ಮಾಡುವಂತಹ ವಿರೋಧ ಪಕ್ಷ ನಮ್ಮ ರಾಜ್ಯದಲ್ಲಿದೆ. ಈ ಹಿಂದೆ ಆಡಳಿತದಲ್ಲಿದ್ದಾಗ ಭಯೋತ್ಪಾದಕರನ್ನು ರಕ್ಷಿಸುವಂತಹ, ಭಯೋತ್ಪಾದಕರ ಕೇಸ್ ತೆಗೆದುಹಾಕುವ ಕೆಲಸವಾಗಿದೆ. ಉಗ್ರಭಾಗ್ಯ, ಪಿಎಫ್‌ಐ ಭಾಗ್ಯ, ಟಿಪ್ಪು ಭಾಗ್ಯ ಎಲ್ಲವನ್ನೂ ಕೂಡ ಸಿದ್ದರಾಮಯ್ಯ ಮತ್ತು ಡಿಕೆಶಿ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮಂಗಳೂರಲ್ಲಿ ಆಗಿರುವ ಕುಕ್ಕರ್ ಬಾಂಬ್ ಬ್ಲಾಸ್ಟ್ ಬಗ್ಗೆ ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ಕುಕ್ಕರ್‌ನಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡೋದು ಪ್ರಪಂಚದಾದ್ಯಂತ ಇದೆ. ಕುಕ್ಕರ್ ಬ್ಲಾಸ್ಟ್ ಆಗಿದ್ದರೆ ದೊಡ್ಡ ಜೀವ ಹಾನಿಯಾಗಿರೋದು ಅಂತ ಪೋಲಿಸರು ಹೇಳಿದ್ದಾರೆ. ಶಾರಿಕ್ ನೆಟ್ವರ್ಕ್ಅನ್ನು ಪೋಲಿಸರು ಕಂಡು ಹಿಡಿದಿದ್ದಾರೆ. ಅದಕ್ಕೆ ಡಿಕೆ ಶಿವಕುಮಾರ್ ಅವರಿಗೆ ಗಾಬರಿಯಾಗಿದೆ, ಆ ನೆಟ್ವರ್ಕ್‌ನಲ್ಲಿ ಕಾಂಗ್ರೆಸ್‌ನವರಿರಬಹುದು ಎಂದು ವಾಗ್ದಾಳಿ ನಡೆಸಿದರು.
NIA, ರಾಜ್ಯ ಪೋಲಿಸ್ ಇಲಾಖೆ ಅದನ್ನು ತನಿಖೆ ಮಾಡುತ್ತಿದೆ. ವೋಟಿನ ಗಂಟಿನ ಆಸೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಭಯೋತ್ಪಾದಕರನ್ನ ಭಯೋತ್ಪಾದಕರೆಂದು ಕರೆಯಬೇಕಿರುವ ಧಮ್ ತೋರಿಸಿ. ಧಮ್ ಇದ್ರೆ ಭಯೋತ್ಪಾದಕರು ಎಂದು ಕರೆಯಿರಿ ಇಲ್ಲ ಸಿದ್ದರಾಮಯ್ಯ, ಡಿಕೆಶಿ ತೆಪ್ಪಗಿರಿ ಎಂದು ಕಿಡಿ ಕಾರಿದರು.
ಇದನ್ನೂ ಓದಿ:ಪ್ರಿಯಾಂಕ್ ಈ ಮೊದಲು ಬಿಡುಗಡೆ ಮಾಡಿದ್ದ ಆಡಿಯೋಗೆ ಸ್ಪಷ್ಟನೆ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ