ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಹೆಚ್ಚು ಚರ್ಚೆಯಾಗುತ್ತಿದೆ. ಇಷ್ಟು ದಿನ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಈಗ ಆಡಳಿತ ಪಕ್ಷದ ನಾಯಕತ್ವದತ್ತ ತಿರುಗಿದೆ. ಬಿಜೆಪಿ ಹಾಲಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವಧಿ ಮುಗಿಯುತ್ತಿದೆ ಎಂಬ ಕಾರಣಕ್ಕೆ ಈ ಚರ್ಚೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಚುನಾವಣಾ ವರ್ಷವಾಗಿರುವ ಕಾರಣ ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮೂರ್ನಾಲ್ಕು ಹೆಸರುಗಳೂ ಮುಂದಿನ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿವೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಂದಾಯ ಸಚಿವ ಆರ್.ಅಶೋಕ್, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಹೆಸರುಗಳು ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಆದರೆ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವರು ಪಕ್ಷದ ಅಧ್ಯಕ್ಷರ ಬದಲಾವಣೆ ಕೇವಲ ವದಂತಿ ಎನ್ನುತ್ತಿದ್ದಾರೆ.
ಸಿ.ಟಿ ರವಿ-ಶೋಭಾ ಏನನ್ನುತ್ತಾರೆ?:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪಕ್ಷದ ಕಾರ್ಯಕರ್ತನಾಗಿ ಪಕ್ಷ ಹೇಳುವ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವನಾಗಿದ್ದ ನನ್ನನ್ನು ಪಕ್ಷ ಸಂಘಟನೆಗೆ ಕರೆಯಿತು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿತು. ಚುನಾವಣೆ ವೇಳೆ ತಮಿಳುನಾಡು, ಕೇರಳ, ಗೋವಾ ಜವಾಬ್ದಾರಿ ವಹಿಸಿತು. ಅದನ್ನು ನಿರ್ವಹಿಸಿದ್ದೇನೆ. ಈಗ ಮತ್ತೆ ಹೊಸ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಆದರೆ, ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸದ್ಯಕ್ಕೆ ಪಕ್ಷದ ಮುಂದಿಲ್ಲ ಎಂದಿದ್ದಾರೆ.