ಬೆಂಗಳೂರು : ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
ಇಂದೊಂದು ಐತಿಹಾಸಿಕ ತೀರ್ಪು :ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ವಿಧಿ ರದ್ದು ಮಾಡಿ ಆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಸರಿ ಎಂದು ಎತ್ತಿಹಿಡಿಯುವ ಮೂಲಕ ಮಾನ್ಯ ಸರ್ವೋಚ್ಛ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದೆ.
ಭಾರತದ ಏಕತೆ, ಅಖಂಡತೆ ರಕ್ಷಿಸಿ, ಜಮ್ಮು ಕಾಶ್ಮೀರದ ಜನತೆಗೆ ನ್ಯಾಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಟ್ಟ ದಿಟ್ಟ ಹೆಜ್ಜೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಮೋದನೆಯ ಬಲವೂ ಸಿಕ್ಕಿದೆ. ದೇಶ ಮೊದಲು ಎನ್ನುವ ಪಕ್ಷದ ಧ್ಯೇಯವನ್ನು ಎತ್ತಿ ಹಿಡಿದ ನಮ್ಮ ಕೇಂದ್ರ ಸರ್ಕಾರಕ್ಕೆ ಹೆಮ್ಮೆಯ ಅಭಿನಂದನೆಗಳು ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೋದಿ ಸರ್ಕಾರದ ಸಾಧನೆಗೆ ಮತ್ತೊಂದು ಗರಿ :ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಾರಿದೆ. ಹಾಗೂ ಕೇಂದ್ರ ಸರ್ಕಾರ ಆರ್ಟಿಕಲ್ 370ನ್ನು ರದ್ದುಪಡಿಸಿರುವುದನ್ನು ಎತ್ತಿ ಹಿಡಿದಿದೆ. ಈ ಸಂದರ್ಭದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೂರದೃಷ್ಟಿ ಇರುವ ಭಾರತದ ಏಕತೆ ಮತ್ತು ಅಖಂಡತೆ ಎತ್ತಿ ಹಿಡಿಯುವ ದಿಟ್ಟ ನಿರ್ಧಾರ ಮಾಡಿ, ಜಮ್ಮು ಕಾರ್ಶಿರದಲ್ಲಿ ಶಾಂತಿ, ನೆಮ್ಮದಿ ಸ್ಥಾಪನೆಗೆ ನಾಂದಿ ಹಾಡಿರುವ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ಸಹಮತದ ಮುದ್ರೆ ಒತ್ತಿದೆ. ಮೋದಿ ಸರ್ಕಾರದ ಸಾಧನೆಗೆ ಮತ್ತೊಂದು ಗರಿ ಇಟ್ಟಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.