ಬೆಂಗಳೂರು: ಫ್ರಾನ್ಸ್‌ನ ರಫೆಲ್ ಯುದ್ಧ ವಿಮಾನ ಭಾರತಕ್ಕೆ ಬಂದಿಳಿದ ದಿನ ಐತಿಹಾಸಿಕ ದಿನವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಅಭಿನಂದಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರಫೆಲ್ ಯುದ್ಧ ವಿಮಾನ ಸರಣಿಯ ಮೊದಲ ಬ್ಯಾಚ್ನ 5 ವಿಮಾನಗಳು ಇಂದು ಭಾರತದ ಭೂ ಸ್ಪರ್ಶ ಮಾಡಿವೆ. ಅಂಬಾಲಾ ವಾಯುನೆಲೆಯಲ್ಲಿ ಯುದ್ಧ ವಿಮಾನಗಳಿಗೆ ಸ್ವಾಗತ ಕೋರಲಾಗಿದ್ದು, ರಫೆಲ್ ಸೇರ್ಪಡೆ ರಕ್ಷಣಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ರಫೆಲ್ ಯುದ್ಧ ವಿಮಾನಗಳು ಹಾರಾಡುತ್ತಾ ಭಾರತದ ವಾಯುಪ್ರದೇಶವನ್ನು ಹಾದು ಬರುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. 5 ರಫೆಲ್ ಗಳು ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸುವ ಮನೋಹರ ದೃಶ್ಯ. ಧನ್ಯವಾದ ಪ್ರಧಾನಿ ನರೇಂದ್ರ ಮೋದಿ ಎಂದು ಟ್ವೀಟ್ ಮಾಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡ ರಫೆಲ್ ಯುದ್ಧ ವಿಮಾನಗಳು ಭಾರತೀಯ ವಾಯು ಪ್ರದೇಶಕ್ಕೆ ಪ್ರವೇಶ ಮಾಡುತ್ತಿರುವ ವಿಡಿಯೋವನ್ನು ಹಾಕಿಕೊಂಡು, ಎರಡು ಸುಖೋಯ್ ಯುದ್ಧವಿಮಾನಗಳು ನೂತನ ರಫೆಲ್ ಯುದ್ಧ ವಿಮಾನಗಳಿಗೆ ಎಸ್ಕಾರ್ಟ್ ನೀಡುತ್ತಿದೆ. ಧನ್ಯವಾದ ಪ್ರಧಾನಿ ಮೋದಿ ಅವರಿಗೆ ಎಂದು ಬರೆದುಕೊಂಡಿದ್ದಾರೆ.
ಭಾರತದ ರಕ್ಷಣಾ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರದ ಮಹತ್ವದ ಕ್ರಮವಿದು. ಈ ಮಹತ್ವಾಕಾಂಕ್ಷಿ ಕಾರ್ಯವನ್ನು ಸಾಕಾರಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಅಭಿನಂದನೆಗಳು ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ದ ಬರ್ಡ್ ಲ್ಯಾಂಡಿಂಗ್ ಸೇಫ್ಲಿ ಇನ್ ಅಂಬಾಲಾ.. ಜೈಹಿಂದ್ ಎಂದು ಡಿಸಿಎಂ ಅಶ್ವತ್ ನಾರಾಯಣ್ ಬರೆದುಕೊಂಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕೂಡ ರಫೆಲ್ ಯುದ್ಧ ವಿಮಾನ ಭಾರತಕ್ಕೆ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ರಫೆಲ್ ಆಗಮನದ ಕ್ಷಣವನ್ನು ಇಡೀ ದೇಶ ಕಾತರದಿಂದ ಎದುರುನೋಡುತ್ತಾ ಸಂಭ್ರಮಾಚರಣೆ ಮಾಡುವಂತೆ ಮಾಡಿದ್ದಕ್ಕೆ ಧನ್ಯವಾದ ಎಂದು ರಾಹುಲ್ ಗಾಂಧಿ ಕಾಲೆಳೆದಿದ್ದಾರೆ.