ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಹತ್ವದ ಸಭೆ ನಡೆಸಿದ್ದಾರೆ. ಈ ಚರ್ಚೆಯ ವೇಳೆ ಸಂಪುಟ ವಿಸ್ತರಣೆ ಅನಿವಾರ್ಯತೆಯ ಕುರಿತು ಸಿಎಂ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಸಂಪುಟ ವಿಸ್ತರಣೆ ವಿಷಯ ಮಾತ್ರ ಕೌತುಕವಾಗಿಯೇ ಉಳಿದಿದೆ.
ಸಿಎಂ ಯಡಿಯೂರಪ್ಪ ಜೊತೆ ಅರುಣ್ ಸಿಂಗ್ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಅರುಣ್ ಸಿಂಗ್ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದರು. ಈ ವೇಳೆ ಚಪಾತಿ, ಅನ್ನ ಸಾಂಬಾರ್, ಪಾಯಸದ ಭೋಜನ ಸೇವಿಸುತ್ತಾ ಸಿಂಗ್ ಸಭೆ ನಡೆಸಿದ್ದು, ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಸಿಎಂ ಜೊತೆ ಚರ್ಚಿಸಿದರು.
ಬಿಜೆಪಿ ನಾಯಕರಿಂದ ಅರುಣ್ ಸಿಂಗ್ ಅವರಿಗೆ ಸನ್ಮಾನ ಈ ವೇಳೆ ಸರ್ಕಾರ ರಚನೆ ನಂತರದ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ ಸಿಎಂ, ಸಂಪುಟ ವಿಸ್ತರಣೆ ಅನಿವಾರ್ಯತೆ ಕುರಿತು ಮನವರಿಕೆ ಮಾಡಿಕೊಟ್ಟರು. ಸಂಪುಟ ಪುನಾರಚನೆಗೆ ಅವಕಾಶ ಸಿಕ್ಕದೆ ಇದ್ದರೂ ವಿಸ್ತರಣೆಗಾದರೂ ಅವಕಾಶ ಸಿಗಬೇಕು. ರಾಜೀನಾಮೆ ಕೊಟ್ಟು ಬಂದವರಿಂದ ಪ್ರತಿನಿತ್ಯ ಬರುತ್ತಿರುವ ಒತ್ತಡಗಳ ಬಗ್ಗೆಯೂ ವಿವರಿಸಿದ್ದು, ಅನುವಾರ್ಯತೆ ಪರಿಸ್ಥಿತಿ ಕುರಿತು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಿಎಂ ನಿವಾಸದಲ್ಲಿ ಭೋಜನ ಸವಿಯುತ್ತಿರುವ ಅರುಣ್ ಸಿಂಗ್ ಸಿಎಂ ಯಡಿಯೂರಪ್ಪ ಅವರ ಎಲ್ಲಾ ಹೇಳಿಕೆಗಳನ್ನೂ ಆಲಿಸಿದ ಅರುಣ್ ಸಿಂಗ್, ಎಲ್ಲವೂ ಸರಿಯಾಗಲಿದೆ ಚಿಂತಿಸಬೇಡಿ ಎನ್ನುವ ಭರವಸೆ ನೀಡಿದ್ದು, 50 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಸಾಕಷ್ಟು ವಿಷಯಗಳ ಪ್ರಸ್ತಾಪಗೊಂಡಿವೆ.
ನಾಯಕತ್ವ ಬದಲಾವಣೆ ಸುದ್ದಿಗಳು, ಸಂಪುಟ ವಿಸ್ತರಣೆ ಸಂಬಂಧ ಗೊಂದಲಕಾರಿ ಹೇಳಿಕೆಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು ಎನ್ನಲಾಗಿದೆ. ಇಷ್ಟೆಲ್ಲಾ ಸಮಾಲೋಚನೆ ನಡೆದರೂ ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆಗೆ ಮಾತ್ರ ಖುದ್ದು ಸಿಎಂ ಯಡಿಯೂರಪ್ಪ ಅವರಿಗೂ ಉತ್ತರ ಸಿಕ್ಕಿಲ್ಲ, ಇನ್ನಷ್ಟು ಸಮಯ ಕಾಯಬೇಕು ಎನ್ನುವ ಪರೋಕ್ಷ ಸುಳಿವನ್ನು ನೀಡಿದರು ಎನ್ನಲಾಗಿದೆ.
ರಾಜ್ಯ ಉಸ್ತುವಾರಿ, ಸಿಎಂ ಭೇಟಿ ಅಂತ್ಯ ಓದಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ತರಾತುರಿ ಯಾಕೆ?: ಅರುಣ್ ಸಿಂಗ್ ಪ್ರಶ್ನೆ
ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಉಪಸ್ಥಿತರಿದ್ದರು. ಸಿಎಂ ನಿವಾಸದಿಂದ ನಿರ್ಗಮಿಸಿದ ಅರುಣ್ ಸಿಂಗ್ ಬಿಜೆಪಿ ಕಚೇರಿಗೆ ತೆರಳಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ನಂತರ ಸಂಜೆ 6 ಗಂಟೆಗೆ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಆಕಾಂಕ್ಷಿಗಳಿಂದ ಸಿಎಂ ಭೇಟಿ:
ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಸಚಿವ ಸ್ಥಾನದ ಆಕಾಂಕ್ಷಿಗಳಾದ ಮುನಿರತ್ನ ಎಂಟಿಬಿ ನಾಗರಾಜ್, ಆರ್ ಶಂಕರ್ 20 ನಿಮಿಷಗಳ ಕಾಲ ಚರ್ಚೆ ನಡೆಸಿದರು. ನಾಳೆಯಿಂದ ಅಧಿವೇಶನ ಆರಂಭವಾಗಲಿದೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದರು ಎನ್ನಲಾಗುತ್ತಿದೆ.