ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ರಾಜ್ಯ ಬಿಜೆಪಿ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಹೊಗೆ ಶಮನಗೊಳಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನ ಶಮನಗೊಳಿಸುವ ಹೊಣಗಾರಿಕೆಯನ್ನು ಹೈಕಮಾಂಡ್ ಅರುಣ್ ಸಿಂಗ್ಗೆ ವಹಿಸಿದ್ದು, ವರಿಷ್ಠರ ಪ್ರತಿನಿಧಿಯಾಗಿ ಜೂನ್ 16 ಅಥವಾ 17 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಇರಲಿದ್ದು ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿರುವ ಅರುಣ್ ಸಿಂಗ್ ಯಡಿಯೂರಪ್ಪ ಬೆಂಬಲಿಗರು, ವಿರೋಧಿ ಬಣದ ಸದಸ್ಯರು, ತಟಸ್ಥ ನಿಲುವು ಹೊಂದಿರುವ ಪಕ್ಷ ನಿಷ್ಠರು ಹೀಗೆ ಮೂರು ವರ್ಗದಿಂದಲೂ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ರಾಜ್ಯದಲ್ಲಿ ಜೂನ್ 21ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡಿದ್ದು, ರಾಜಕೀಯ ಸಭೆ, ಸಮಾರಂಭಕ್ಕೆ ಅನುಮತಿ ನಿರ್ಬಂಧಿಸಲಾಗಿದೆ. ಹೀಗಾಗಿ ತಂಡ ತಂಡವಾಗಿ ಶಾಸಕರ ಸಭೆ ಮಾಡದಿರಲು ಅರುಣ್ ಸಿಂಗ್ ನಿರ್ಧರಿಸಿದ್ದು, ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕರೆಸಿಕೊಂಡು ಮಾತುಕತೆ ನಡೆಸಲಿದ್ದಾರೆ. ನಾಯಕತ್ವ ಬದಲಾವಣೆ ಪ್ರಸ್ತಾಪಕ್ಕೆ ಕಾರಣ, ನಾಯಕತ್ವದ ವಿರುದ್ಧ ಅಸಮಧಾನಕ್ಕೆ ಕಾರಣ ಸೇರಿದಂತೆ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಈಗಾಗಲೇ ಸಾಕಷ್ಟು ಸದ್ದು ಮಾಡಿರುವ ರೆಬೆಲ್ಗಳು ಸದ್ಯಕ್ಕೆ ಪ್ರತ್ಯೇಕ ಸಭೆಯಂತಹ ಚಟುವಟಿಕೆ ನಡೆಸದೇ ಇರಲು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆ ನೀಡಿದ ನಂತರ ಸಭೆ ನಡೆಸಿದಲ್ಲಿ ಹೈಕಮಾಂಡ್ಗೆ ಬೇರೆಯ ಸಂದೇಶ ಹೋಗಲಿದೆ. ಲಾಕ್ಡೌನ್ ಇದೆ ಹೀಗಾಗಿ ಸಭೆ ನಡೆಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದು, ಪ್ರಭಾರಿಗಳ ಮುಂದೆಯೇ ಎಲ್ಲವನ್ನು ನೇರವಾಗಿ ಹೇಳುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸುನೀಲ್ ಕುಮಾರ್, ಸಿ.ಪಿ. ಯೋಗೀಶ್ವರ್ ಸೇರಿದಂತೆ ವಿರೋಧಿ ಬಣದ ನಾಯಕರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ಆದರೆ ಅದರ ಅನಿವಾರ್ಯತೆ ಇದೆ. ವಯಸ್ಸಿನ ಕಾರಣದಿಂದ ಆಡಳಿತ ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅವರ ಬದಲು ಅವರ ಪುತ್ರ ವಿಜಯೇಂದ್ರ ಆಡಳಿತ ನಡೆಸುತ್ತಿದ್ದಾರೆ. ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ. ಇನ್ನು ಎರಡು ವರ್ಷ ಆಡಳಿತ ನಡೆಸಬೇಕು. ಮುಂದಿನ ಚುನಾವಣೆ ದೃಷ್ಟಿಯಿಂದಲೂ ಪರ್ಯಾಯ ನಾಯಕತ್ವ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯವನ್ನು ಅರುಣ್ ಸಿಂಗ್ ಮುಂದೆ ಇಡಲಿದ್ದಾರೆ. ಸಿಎಂ ವಿರುದ್ಧ ಚಾರ್ಜ್ಶೀಟ್ ರೂಪದಲ್ಲಿ ದೂರು ನೀಡಲಿದ್ದಾರೆ. ಕೊರೊನಾ ವಿಚಾರದಲ್ಲಿ ಆಡಳಿತ ವೈಫಲ್ಯ, ಸಿಎಂ ಪುತ್ರನ ಹಸ್ತಕ್ಷೇಪದ ಕುರಿತು ದಾಖಲೆಗಳನ್ನು ಒದಗಿಸಿ ತಮ್ಮ ಅಸಮಧಾನದ ನಡೆಯನ್ನು ಸಮರ್ಥಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.