ಬೆಂಗಳೂರು :ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರೈಸುತ್ತಿದೆ. ಬರದ ಸಂದರ್ಭದಲ್ಲಿ ರಚನೆಯಾದ ಸರ್ಕಾರ ನೆರೆಹಾವಳಿ, ಸರ್ಕಾರ ಉಳಿಸಿಕೊಳ್ಳುವ ಅಗ್ನಿಪರೀಕ್ಷೆ, ಕೋವಿಡ್-19 ಮಹಾಮಾರಿ ಹೀಗೆ ಸಾಲು ಸಾಲು ಸವಾಲುಗಳಲ್ಲೇ ವರ್ಷವನ್ನು ಕಳೆಯುವಂತಾಯ್ತು. ಇದರ ನಡುವೆ ರಾಜ್ಯದ ಅಭಿವೃದ್ಧಿ ಕುಂಟುತ್ತಾ ಸಾಗಿದ್ದು, ಬರಿದಾದ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳುವ ಲೆಕ್ಕಾಚಾರದಲ್ಲೇ ಸಿಎಂ ಮುಳುಗಿ ಹೋಗುವಂತಾಗಿದೆ.
2019ರ ಜುಲೈ 26ರಂದು ಯಡಿಯೂರಪ್ಪ ರಾಜಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಒನ್ ಮ್ಯಾನ್ ಕ್ಯಾಬಿನೆಟ್ ಆಗಿದ್ದ ಬಿಎಸ್‌ವೈಗೆ ಮೊದಲು ಎದುರಾಗಿದ್ದೇ ನೆರೆ ಹಾವಳಿ. ಉತ್ತರ ಕರ್ನಾಟಕದಲ್ಲಿ ತಲೆದೂರಿದ ನೆರೆ ಪರಿಹಾರಕ್ಕೆ ಸ್ವತಃ ಸಿಎಂ ಮುಂದಾಗಿದ್ದರು. ಸಂಪುಟದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ರಾಜ್ಯವನ್ನು ಸುತ್ತಿ ನೆರೆ ಪರಿಹಾರ ಕಾರ್ಯವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಯಿತು. ಕೇಂದ್ರದ ನೆರವು ಸರಿಯಾಗಿ ಸಿಕ್ಕದೇ ರಾಜ್ಯದ ಬೊಕ್ಕಸದಿಂದಲೇ ಹಣವನ್ನು ವ್ಯಯಿಸಬೇಕಾಯಿತು. ನಂತರ ಕೇಂದ್ರ ಬಿಡುಗಡೆ ಮಾಡಿದ 1200 ಕೋಟಿ ಪರಿಹಾರ ರಾಜ್ಯದ ನಿರೀಕ್ಷೆಯನ್ನು ಹುಸಿಯಾಗಿಸಿದ್ದು, ರಾಜ್ಯವೇ ಬೊಕ್ಕಸವನ್ನು ಬರಿದುಮಾಡಿಕೊಂಡು ಜನರ ಮುಂದೆ ನೆರವಿಗೆ ಕೈಚಾಚಬೇಕಾಯಿತು.
ನಂತರ ಸಂಪುಟ ರಚನೆಯ ಸರ್ಕಸ್ ನಡೆಯಿತು. ನೆರೆ ಪರಿಹಾರ ಕಾರ್ಯದ ನಡುವೆಯಲ್ಲೇ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹಿಡಿದು ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿದ್ದರು. ಆಪ್ತರಿಗೆ ಸಿಎಂ ಮಣೆ ಹಾಕುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗುವಂತೆ ಸಚಿವರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿತ್ತು. ಗೆದ್ದ ಉಮೇಶ್ ಕತ್ತಿಗೆ ಅವಕಾಶ ನೀಡದೆ ಸೋತ ಲಕ್ಷ್ಮಣ ಸವದಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿಯೂ ಉಪ ಮುಖ್ಯಮಂತ್ರಿ ಸ್ಥಾನವನ್ನು ಹೈಕಮಾಂಡ್ ಕರುಣಿಸಿತ್ತು. ಮೂವರು ಡಿಸಿಎಂಗಳನ್ನು ಒಳಗೊಂಡ 17 ಸಚಿವರು ಅಗಸ್ಟ್20 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಇನ್ನೂ ಅವಕಾಶ ಸಿಗದ ಆಕಾಂಕ್ಷಿಗಳಲ್ಲಿ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಸೇರಿದಂತೆ ಹಲವರು ಅಸಮಾಧಾನ ಹೊರಹಾಕಿದ್ದರು. ಅವರೆಲ್ಲರನ್ನೂ ಸಮಾಧಾನಪಡಿಸುವ ಮೂಲಕ ಯಡಿಯೂರಪ್ಪ ಸರ್ಕಾರವನ್ನು ಮುನ್ನಡೆಸಬೇಕಾಯಿತು. ಇದರ ನಡುವೆ ಸರ್ಕಾರ ರಚನೆಗೆ ಕಾರಣರಾಗಿದ್ದ ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಯಿತು. ಸ್ವತಃ ಮುಂದೆ ನಿಂತು ಯಡಿಯೂರಪ್ಪ ಬಿಜೆಪಿ ಸೇರಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಗೆ ಟಿಕೇಟ್ ಕೊಡಿಸಿದರು.
ಎಲ್ಲಾ 15 ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಿದ್ದರು. ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸುವ ಉಪ ಚುನಾವಣೆಯಲ್ಲಿ 12 ಸ್ಥಾನ ಗೆಲ್ಲುವ ಮೂಲಕ ಸರ್ಕಾರವನ್ನು ಭದ್ರಪಡಿಸಿಕೊಳ್ಳಲಾಯಿತು. ನಂತರ ಮತ್ತೆ ಸಂಪುಟ ವಿಸ್ತರಣೆಯ ಸರ್ಕಸ್ ನಡೆಸಬೇಕಾಯಿತು. ಬೇರೆ ಪಕ್ಷದಿಂದ ಬಂದವರಿಗೆ ಮಾತ್ರ ಅವಕಾಶ ನೀಡಿದರೆ ಹೇಗೆ? ಮೂಲ ಬಿಜೆಪಿಗರಿಗೂ ಅವಕಾಶ ನೀಡಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ಮತ್ತೆ ಪಟ್ಟಿ ಹಿಡಿದು ಸಿಎಂ ದೆಹಲಿ ಪ್ರಯಾಣ ಬೆಳೆಸಿದ್ದರು. ನಂಬಿ ಬಂದಿದ್ದ ವಲಸಿಗರನ್ನು ಕೈಹಿಡಿಯಲೇಬೇಕಾದ ಅನಿವಾರ್ಯತೆಯನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟು ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡರು.
2ನೇ ಸಂಪುಟ ವಿಸ್ತರಣೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆಯ ಶಿಕ್ಷೆಗೆ ಗುರಿಯಾಗಿ ಕಾಂಗ್ರೆಸ್, ಜೆಡಿಎಸ್ ತೊರೆದು ಬಂದು ಉಪ ಚುನಾವಣೆಯಲ್ಲಿ ಗೆದ್ದವರಲ್ಲಿ 10 ಜನರಿಗೆ ಮಾತ್ರ ಅವಕಾಶ ನೀಡಲಾಯಿತು. 10 ಶಾಸಕರು 2020ರ ಫೆಬ್ರವರಿ 6 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಬಾರಿ ಮೂಲ ಬಿಜೆಪಿಯ ಯಾರಿಗೂ ಅವಕಾಶ ನೀಡಲಿಲ್ಲ. ಪಕ್ಷದಲ್ಲಿ ಅಸಮಾಧಾನ ಏಳುವ ಕಾರಣಕ್ಕೆ ವಲಸಿಗರ ಹೊರತು ಯಾರಿಗೂ ಅವಕಾಶ ಕಲ್ಪಿಸಲಿಲ್ಲ. ಇದರಿಂದ ಉಮೇಶ್ ಕತ್ತಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದರು. ಎರಡು ಮೂರು ಬಾರಿ ಭಿನ್ನಮತೀಯ ಚಟುವಟಿಕೆಯನ್ನೂ ನಡೆಸಿದ್ದರು. ವಿಧಾನಸಭೆ ಅಧಿವೇಶನ ನಡೆಯುವ ವೇಳೆಯಲ್ಲಿಯೇ ಪ್ರತ್ಯೇಕ ಸಭೆ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.