ಕರ್ನಾಟಕ

karnataka

ಆರ್ಥಿಕ ಸಂಕಷ್ಟದ ಮಧ್ಯೆಯೂ ಸರ್ಕಾರಕ್ಕೆ ಪ್ರಚಾರದ ಗೀಳು: ಜಾಹೀರಾತಿಗೆ ಸರ್ಕಾರ ಖರ್ಚು ಮಾಡಿದ್ದೆಷ್ಟು?

By

Published : Oct 16, 2021, 4:39 PM IST

ರಾಜ್ಯ ಸರ್ಕಾರ ಸೆಪ್ಟೆಂಬರ್​ವರೆಗೆ ವಿವಿಧ ಪತ್ರಿಕೆ, ಮಾಧ್ಯಮಗಳಲ್ಲಿನ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಜಾಹೀರಾತಿಗಾಗಿಯೇ ಈ ಬಾರಿ ಈವರೆಗೆ ಸುಮಾರು 13.30 ಕೋಟಿ ರೂ. ಖರ್ಚು ಮಾಡಿದೆ. ಇನ್ನು 2020-21ಸಾಲಿನಲ್ಲಿ ಬಿಎಸ್​​ವೈ ನೇತೃತ್ವದ ಸರ್ಕಾರ ತನ್ನ ಕಾರ್ಯಕ್ರಮ, ಯೋಜನೆಗಳ ಪ್ರಚಾರದ ಜಾಹೀರಾತಿಗಾಗಿ ಬರೋಬ್ಬರಿ 102.90 ಕೋಟಿ ರೂ. ದುಂದು ವೆಚ್ಚ ಮಾಡಿದೆ.

state bjp government spent 13.30 crore for advertisement
ಜಾಹೀರಾತಿಗೆ ಕೋಟಿ ಕೋಟಿ ವ್ಯಯ

ಬೆಂಗಳೂರು: ಕೋವಿಡ್ ಲಾಕ್‌ಡೌನ್​​ನಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಪ್ರಚಾರದ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದನ್ನು ಬಿಟ್ಟಿಲ್ಲ.

ಒಂದೆಡೆ ಕೋವಿಡ್ ಇನ್ನೊಂದೆಡೆ ಲಾಕ್‌ಡೌನ್. ಈ ಡಬಲ್ ಟ್ರಬಲ್​​ನಿಂದ ರಾಜ್ಯದ ಆರ್ಥಿಕತೆಯೇ ಬುಡಮೇಲಾಗಿದೆ. ಕಳೆದ ಎರಡು ವರ್ಷದಿಂದ ಕಾಡುತ್ತಿರುವ ಮಹಾಮಾರಿ ಕೋವಿಡ್ ಹಾಗೂ ಲಾಕ್‌ಡೌನ್ ರಾಜ್ಯದ ಬೊಕ್ಕಸವನ್ನೇ ಖಾಲಿಯಾಗಿಸಿದೆ. ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೇ ಹಣದ ಕೊರತೆ ಎದುರಾಗಿದೆ. ಭಾರಿ ಪ್ರಮಾಣದಲ್ಲಿ ಸಾಲ ಮಾಡಿ ಸರ್ಕಾರಿ ನೌಕರರ ವೇತನ ಪಾವತಿಸಲಾಗುತ್ತಿದೆ.

2020-21 ಹಾಗೂ 2021-22ರಲ್ಲಿ ವಕ್ಕರಿಸಿದ ಕೋವಿಡ್ ಹಾಗೂ ಅದರ ನಿಯಂತ್ರಣಕ್ಕಾಗಿ ಹೇರಿದ ಲಾಕ್‌ಡೌನ್ ರಾಜ್ಯದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದೆ. ಹಣಕಾಸು ನಿರ್ವಹಣೆಗಾಗಿ ಸರ್ಕಾರ ವೆಚ್ಚ ಕಡಿತದ ಜೊತೆಗೆ ಆಡಳಿತ ಸುಧಾರಣೆಯೊಂದಿಗೆ ದುಂದು ವೆಚ್ಚ ಕಡಿತದ ಮೊರೆ ಹೋಗಿದೆ.

ಆರ್ಥಿಕ ಪರಿಸ್ಥಿತಿ ಇಷ್ಟು ಹದಗೆಟ್ಟಿರುವ ಮಧ್ಯೆಯೂ ರಾಜ್ಯ ಬಿಜೆಪಿ ಸರ್ಕಾರ ತನ್ನ ಪ್ರಚಾರದ ಗೀಳನ್ನು ಬಿಟ್ಟಿಲ್ಲ. ಯಡಿಯೂರಪ್ಪ ಸರ್ಕಾರ ಇದ್ದಾಗಲೂ ಅಷ್ಟೇ ಈಗ ಬೊಮ್ಮಾಯಿ ಸರ್ಕಾರನೂ ಅಷ್ಟೇ, ಸರ್ಕಾರದ ಕಾರ್ಯಕ್ರಮಗಳ ಪ್ರಚಾರ ಜಾಹೀರಾತಿಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ.

ಜಾಹೀರಾತಿಗೆ ಕೋಟಿ ಕೋಟಿ ಖರ್ಚು:

ಕೋವಿಡ್ ಲಾಕ್‌ಡೌನ್​​ನಿಂದ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಅಗತ್ಯ ಮೂಲ ಸೌಕರ್ಯ‌ ಕಾಮಗಾರಿಗಳಿಗೆ ವ್ಯಯಿಸಲೇ ಕಾಸಿಲ್ಲ, ಅಂತದ್ರಲ್ಲಿ ಬಿಜೆಪಿ ಸರ್ಕಾರ ಕೋಟಿ ಕೋಟಿ ಪತ್ರಿಕೆ, ಮಾಧ್ಯಮಗಳಲ್ಲಿ ಪ್ರಚಾರದ ಜಾಹೀರಾತು ನೀಡುವ ಗೀಳನ್ನು ಕಡಿಮೆ ಮಾಡಿಲ್ಲ. ಕೋಟಿಗಟ್ಟಲೆ ಸಾರ್ವಜನಿಕ ಹಣವನ್ನು ಈ ಸಂಕಷ್ಟದ ಕಾಲದಲ್ಲೂ ಜಾಹೀರಾತಿಗೆ ವ್ಯಯಿಸುತ್ತಿರುವುದು ದುರಂತವೇ ಸರಿ.

ರಾಜ್ಯ ಸರ್ಕಾರ ಸೆಪ್ಟೆಂಬರ್​ವರೆಗೆ ವಿವಿಧ ಪತ್ರಿಕೆ, ಮಾಧ್ಯಮಗಳಲ್ಲಿನ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಜಾಹೀರಾತಿಗಾಗಿಯೇ ಈ ಬಾರಿ ಈವರೆಗೆ ಸುಮಾರು 13.30 ಕೋಟಿ ರೂ. ಖರ್ಚು ಮಾಡಿದೆ. ವಾರ್ತಾ ಇಲಾಖೆ ನೀಡಿದ ಮಾಹಿತಿ ಪ್ರಕಾರ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಕುರಿತ ಪ್ರಚಾರಕ್ಕಾಗಿ ಬರೋಬ್ಬರಿ 3.31 ಕೋಟಿ ರೂ. ವ್ಯಯಿಸಿದೆ.

ಇನ್ನು 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕುರಿತ ಜಾಹೀರಾತಿಗಾಗಿ ಸುಮಾರು 1.42 ಕೋಟಿ ರೂ. ಖರ್ಚು ಮಾಡಿದ್ದರೆ, ಅಮೃತ ಮಹೋತ್ಸವ ಯೋಜನೆಗಳ ಕುರಿತ ಪ್ರಚಾರ ಜಾಹೀರಾತಿಗೆ 55 ಲಕ್ಷ ರೂ., ನೂತನ ರಾಷ್ಟ್ರೀಯ ನೀತಿ ಚಾಲನೆ ಕುರಿತ ಪ್ರಚಾರಕ್ಕಾಗಿ 1.07 ಕೋಟಿ ರೂ. ಖರ್ಚು ಮಾಡಲಾಗಿದೆ.

ಆಗಸ್ಟ್ 2020ರಿಂದ ಆಗಸ್ಟ್ 31, 2021ರವರೆಗೆ ಹೋರ್ಡಿಂಗ್ಸ್, ಬಸ್ ಶೆಲ್ಟರ್ಸ್, ಬಿಎಂಟಿಸಿ ಮತ್ತು ಕೆಎಸ್​ಆರ್​​ಟಿಸಿ ಬಸ್​​​ಗಳಲ್ಲಿ ಜಾಹೀರಾತು ಅಳವಡಿಕೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಹೋರ್ಡಿಂಗ್ಸ್‌ ಪ್ರಚಾರದ ವೆಚ್ಚವಾಗಿ 7.93 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು ಬಿಎಂಟಿಸಿ ಬಸ್​​​​ಗಳ ಮೇಲೆ ಜಾಹೀರಾತು ಪ್ರಚಾರಕ್ಕಾಗಿ 1.96 ಕೋಟಿ ರೂ. ವ್ಯಯಿಸಿದೆ. ಕೆಎಸ್​ಆರ್​​ಟಿಸಿ ಬಸ್​​​ಗಳಲ್ಲಿ ಜಾಹೀರಾತಿಗಾಗಿ 7.74 ಕೋಟಿ ರೂ., ಬಸ್ ಶೆಲ್ಟರ್ ಮೇಲಿನ ಪ್ರಚಾರ ಜಾಹೀರಾತಿಗಾಗಿ ಸರ್ಕಾರ 3.98 ಕೋಟಿ ರೂ. ವ್ಯಯಿಸಿದೆ.

2020-21ರಲ್ಲೂ ಜಾಹೀರಾತಿಗೆ ಕೋಟಿ ಕೋಟಿ ವ್ಯಯ:

ವಾರ್ತಾ ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ 2020-21ಸಾಲಿನಲ್ಲಿ ಬಿಎಸ್​​ವೈ ನೇತೃತ್ವದ ಸರ್ಕಾರ ತನ್ನ ಕಾರ್ಯಕ್ರಮ, ಯೋಜನೆಗಳ ಪ್ರಚಾರದ ಜಾಹೀರಾತಿಗಾಗಿ ಬರೋಬ್ಬರಿ 102.90 ಕೋಟಿ ರೂ. ದುಂದು ವೆಚ್ಚ ಮಾಡಿದೆ.

ಪ್ರಮುಖ ಅಭಿವೃದ್ಧಿ ಕಾಮಗಾರಿಗೇ ಹಣ ನೀಡಲು ಬೊಕ್ಕಸದಲ್ಲಿ ಕಾಸಿಲ್ಲದ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಕೇವಲ ತಮ್ಮ ಸರ್ಕಾರದ ಯೋಜನೆಗಳ ಪ್ರಚಾರಕ್ಕಾಗಿ ಇಷ್ಟು ದೊಡ್ಡ ಮಟ್ಟಿನ ಹಣ ಖರ್ಚು ಮಾಡಿರುವುದು ಹುಬ್ಬೇರಿಸುವಂತೆ ಮಾಡಿತ್ತು.

ರಾಜ್ಯ ಹಾಗೂ ಜಿಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಸಂಬಂಧ ಸರ್ಕಾರ 2020-21ರಲ್ಲಿ 25.90 ಕೋಟಿ ರೂ. ಖರ್ಚು ಮಾಡಿದೆ. ಎಲ್ಲ ಸರ್ಕಾರಗಳು ತಮ್ಮ ಕಾರ್ಯಕ್ರಮ, ಯೋಜನೆಗಳ ಜಾಹೀರಾತು ನೀಡುವುದು ಸಾಮಾನ್ಯ. ಆದರೆ, ಈ ಬಾರಿ ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆ ಇಷ್ಟು ದೊಡ್ಡ ಪ್ರಮಾಣದ ಜಾಹೀರಾತು ಖರ್ಚಿನ ಅನಿವಾರ್ಯತೆ ಏನಿದೆ ಎಂಬುದೇ ಎಲ್ಲರ ಪ್ರಶ್ನೆ.

ABOUT THE AUTHOR

...view details