ಭಾರತವನ್ನು ಹಿಂದೂರಾಷ್ಟ್ರ ಎನ್ನಲು ಸಿದ್ದರಾಮಯ್ಯಗೆ ಭಯ ಇರಬಹುದು, ಆದರೆ ನಮಗೆ ಆ ಭಯ ಇಲ್ಲ: ರವಿಕುಮಾರ್ ಬೆಂಗಳೂರು: ಪ್ರಪಂಚದಲ್ಲಿ ಭಾರತ ಒಂದರಲ್ಲೇ ಹಿಂದೂ ಧರ್ಮ ಇರೋದು. ಸಿದ್ದರಾಮಯ್ಯ ಯಾವುದೋ ಅಮಲಿನಲ್ಲಿದ್ದಾರೆ. ಹಿಂದೂ ಧರ್ಮ ಅನ್ನೋದು ಈ ದೇಶದ ಸಂಸ್ಕೃತಿ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳುತ್ತೇನೆ. ಪ್ರಪಂಚದಲ್ಲಿ ಇರೋದು ಒಂದೇ ಹಿಂದೂರಾಷ್ಟ್ರ. ಭಾರತ ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರ ಎಂದರೆ ಕೇವಲ ಹಿಂದೂಗಳು ಮಾತ್ರ ವಾಸ ಮಾಡುತ್ತಿಲ್ಲ ಅನ್ನೋದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಹಿಂದೂ ಎಂದರೆ ಇದು ನಮ್ಮ ಸಂಸ್ಕೃತಿ, ಜೀವನಪದ್ದತಿ, ಹಿಂದೂಸ್ತಾನ, ಹಿಂದೂ ಧರ್ಮ. ಇದನ್ನ ಅರ್ಥ ಮಾಡಿಕೊಳ್ಳಬೇಕು. ಹಿಂದೂಗಳು ಅಂದರೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ವಿರೋಧ ಮಾಡೋದು ಅಂತಲ್ಲ. ಭಾರತ ಹಿಂದೂ ರಾಷ್ಟ್ರ. ಹಿಂದೂ ರಾಷ್ಟ್ರ ಅಂತ ಕರೆಯೋಕೆ ನಿಮಗೆ ಭಯ ಇರಬಹುದು. ಆದರೆ ನಮಗೆ ಯಾವುದೇ ಭಯ ಇಲ್ಲ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಟಿಪ್ಪು ಈ ದೇಶದವನು ನಿಜ. ಆದರೆ, ಈ ದೇಶದಲ್ಲಿದ್ದು ಈ ದೇಶದವರಂತೆ ಬದುಕಲಿಲ್ಲ. ಆತ ಮತಾಂಧ, ಮತಾಂತರ ಮಾಡಿದ. ಸಾವಿರಾರು ಮಂದಿರಗಳನ್ನು ಕೊಳ್ಳೆ ಹೊಡೆದ. ಇವರ ಕಾಲದಲ್ಲಿ ಸ್ತ್ರೀಯರ ಮಾನ ಭಂಗ ಮಾಡಿದ್ದರು. ಪರ್ಷಿಯನ್ ಭಾಷೆ ಹೇರಿದರು. ಸಾಕಷ್ಟು ಅನ್ಯಾಯ ಮಾಡಿದರು. ಹಾಗಾಗಿ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಬಾರದು ಎಂದು ಹೇಳಿದರು.
ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಪ್ರಪಂಚಕ್ಕೆ ಮಾದರಿ. ಮೀಸಲಾತಿ ಪ್ರಪಂಚದಲ್ಲಿ ಮೊದಲ ಬಾರಿಗೆ ತಂದವರು ಅವರು. ಬಡವರಿಗೆ ವಿಶ್ವವಿದ್ಯಾಲಯ ಕಟ್ಟಿದವರು, ಕೆಆರ್ಎಸ್ ಕಟ್ಟಿದವರು, ಬೆಂಗಳೂರನ್ನು ಕಟ್ಟುವುದರಲ್ಲೂ ಅವರ ಪಾತ್ರವಿದೆ. ಅಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲಿ, ಈ ಟಿಪ್ಪು ಎಲ್ಲಿ.? ಹಾಗಾಗಿ ನಾವು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕು ಎಂದು ಆಗ್ರಹಿಸಿದರು.
ಇಂದು ನಮ್ಮ ಬಿಜೆಪಿಯ ತಂಡ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಲಿದೆ. ಶೌಚಗುಂಡಿಗೆ ಮಕ್ಕಳನ್ನು ಇಳಿಸಿ ಸ್ವಚ್ಚಗೊಳಿಸೋ ಕೆಲಸವನ್ನು ಅಧ್ಯಾಪಕರು ಮಾಡಿಸಿದ್ದಾರೆ. ಗುಂಡಿಗೆ ಇಳಿದಿದ್ದರಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತ್ರೇತಾಯುಗದಲ್ಲಿ ನಾವಿಲ್ಲ. ಇಷ್ಟೊಂದು ಟೆಕ್ನಾಲಜಿ ಬಂದ ಮೇಲೆ ಶೌಚಗುಂಡಿ ಸ್ವಚ್ಚತೆಗೆ ಮೆಶಿನ್ ಬಳಸಬೇಕು ಅಂತಿದೆ. ಮನುಷ್ಯರು ಇಳಿಯಬಾರದು ಅಂತಿದೆ. ಇದು ನಾಚಿಕೆಗೇಡಿನ ಪರಮಾವಧಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ನಾವೆಲ್ಲ ಹೊರಟಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಬರಲಿದ್ದೇವೆ.ಈ ರೀತಿ ಇನ್ಯಾವ ಶಾಲೆಗಳಿವೆ ಸರಿಪಡಿಸಬೇಕು ಎಂದು ಹೊರಟಿದ್ದೇವೆ ಎಂದರು.
ಗ್ಯಾರಂಟಿ ಅಮಲಿನಲ್ಲಿರೋ ಸರ್ಕಾರ ಜಾಗೃತ ಆಗಬೇಕು. ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲೇ ಸರ್ಕಾರ ಇತ್ತು.ಆದರೂ ಸಿಎಂ, ಡಿಸಿಎಂ ಒಂಟಿಮುರಿ ಗ್ರಾಮಕ್ಕೆ ತೆರಳಿ ವಿವಸ್ತ್ರಕ್ಕೊಳಗಾದ ಮಹಿಳೆ ಭೇಟಿ ಮಾಡಲಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ :ಭಾರತ ಕೇವಲ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ