ಬೆಂಗಳೂರು:ಅಂತಿಮವಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಅಪಮಾನಗೊಳಿಸಿದೆ. ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಉದ್ಧಟತನದಿಂದ ವರ್ತಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಆಣತಿ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ದಾರೆ. ಇವರಿಗೆ ಸಂವಿಧಾನಕ್ಕಿಂತ ನಕಲಿ ಗಾಂಧಿ ಕುಟುಂಬವೇ ಶ್ರೇಷ್ಠ! ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಸುಳ್ಳಿನ ಜಾತ್ರೆ, ಉತ್ತರಿಸಿ ಡಿಕೆಶಿ ಎಂದು ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಹಮ್ಮಿಕೊಂಡಿರುವ ಸುಳ್ಳಿನಜಾತ್ರೆ ಬರಬರುತ್ತಾ ಕೋವಿಡ್ ಯಾತ್ರೆಯಾಗಿ ಬದಲಾಗುತ್ತಿದೆ. ಸರ್ಕಾರದ ನಿಯಂತ್ರಣ ಕ್ರಮಗಳಿಗೆ ಬಗ್ಗದೇ, ಜನರ ಆಕ್ರೋಶಗಳಿಗೆ ಮಣಿಯದ ಕಾಂಗ್ರೆಸ್ ಈಗ ನ್ಯಾಯಾಲಯದ ಮಧ್ಯಪ್ರವೇಶದಿಂದ ಕಂಗಾಲಾಗಿದೆ. ಬೆಂಗಳೂರಿಗೆ ನೀರು ಪೂರೈಸುತ್ತೇವೆ ಎಂದು ಜನರನ್ನು ಭಾವನಾತ್ಮಕವಾಗಿ ಸೆಳೆದ ಕಾಂಗ್ರೆಸ್ ಪಕ್ಷ ಈಗ ಬೆಂಗಳೂರಿಗೆ ಕೋವಿಡ್ ವಿಸ್ತರಿಸುತ್ತಿದೆ. ಸುಳ್ಳಿನ ಜಾತ್ರೆಯಲ್ಲಿ ಭಾಗಿಯಾಗುತ್ತಿರುವವರೆಲ್ಲಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಯಾತ್ರೆಯ ಮೂಲಕ ಕೋವಿಡ್ ವ್ಯಾಪಿಸಿದ್ದೇ ಕಾಂಗ್ರೆಸ್ ಸಾಧನೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಕಾಂಗ್ರೆಸ್ನಿಂದ ಸೋಂಕು ಹಬ್ಬಿದೆ:
ನಿಯಂತ್ರಣದಲ್ಲಿದ್ದ ಕೋವಿಡ್ ಕಾಂಗ್ರೆಸ್ ನಾಯಕರ ರಾಜಕೀಯ ಪ್ರೇರಿತ ನಡೆಯಿಂದಾಗಿ ಮತ್ತೆ ಉಲ್ಬಣಗೊಳ್ಳುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಕೋವಿಡ್ ಎಲ್ಲಿದೆ ಎಂದು ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಉದ್ಧಟತನ ಪ್ರದರ್ಶಿಸಿದ್ದರು. ಕಾಂಗ್ರೆಸ್ಸಿಗರ ನಡೆಯಿಂದ ಇಂದು ರಾಜ್ಯದಲ್ಲಿ ಸೋಂಕಿನ ಪ್ರಮಾಣ 22 ಸಾವಿರ ತಲುಪಿದೆ. ವೈರಸ್ ಹಬ್ಬಿಸಿ, ರಾಜ್ಯದ ಜನರ ಆತಂಕಕ್ಕೆ ಕಾರಣವಾದ ಕಾಂಗ್ರೆಸ್ ಬೇಷರತ್ ಕ್ಷಮೆ ಯಾಚಿಸಲಿ ಎಂದು ಬಿಜೆಪಿ ಆಗ್ರಹಿಸಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಪ್ರಧಾನಿ ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ವರಿಷ್ಠರೂ ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು. ನಿಮ್ಮ ರಾಜ್ಯ ಘಟಕದ ಉದ್ಧಟತನ, ಬೇಜವಾಬ್ದಾರಿಯಿಂದ ಇಂದು ಕರ್ನಾಟಕದಲ್ಲಿ ಕೋವಿಡ್ ಸ್ಫೋಟಗೊಂಡಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೂ ಬಿಜೆಪಿ ಕಿಡಿಕಾರಿದೆ.