ಕರ್ನಾಟಕ

karnataka

ETV Bharat / state

ನಾಳೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ಅಭ್ಯರ್ಥಿಗಳ ಆಯ್ಕೆ ಕುರಿತು ಅಮಿತ್ ಶಾ ಮಹತ್ವದ ಸಭೆ - ಇಂದು ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ

ಇಂದು ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಕೂಡ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿದೆ.

Central home Minister Amith Sha
ಕೇಂದ್ರ ಗೃಹ ಸಚಿವ ಅಮಿತ್ ಶಾ

By

Published : Mar 25, 2023, 1:46 PM IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋರ್ ಕಮಿಟಿ ಸಭೆ ನಡೆಸಲಿದ್ದು, ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಹೀಗಾಗಿ ನಾಳಿನ ಸಭೆ ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುತ್ತಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್​ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಆದರೆ ಬಿಜೆಪಿ ಪಟ್ಟಿ ಇನ್ನು ಜಗನ್ನಾಥ ಭವನದಿಂದ ದೆಹಲಿಗೆ ರವಾನೆಯೇ ಆಗಿಲ್ಲ. ವರಿಷ್ಠರ ಸೂಚನೆಯಂತೆ ಜಿಲ್ಲಾ ಸಮಿತಿಗಳಿಂದ ಪ್ರತಿ ಪಕ್ಷದಿಂದ ಮೂರು ಹೆಸರುಗಳನ್ನು ಪಡೆದುಕೊಂಡಿರುವ ರಾಜ್ಯ ಘಟಕ ಇದೀಗ ಪ್ರತಿ ಪಕ್ಷದಿಂದ 2 ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸಿಕೊಡಬೇಕಿದೆ. ಹಾಗಾಗಿ ಈ ಕುರಿತು ನಾಳೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಕಳೆದ ಮೂರು ತಿಂಗಳಿನಿಂದ ಕೇವಲ ಪ್ರಚಾರ ಕಾರ್ಯ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸೀಮಿತವಾಗಿದ್ದ ಅಮಿತ್ ಶಾ ರಾಜ್ಯ ಪ್ರವಾಸ ನಾಳೆ ಪ್ರಚಾರದ ಜೊತೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಸುವುದಕ್ಕೂ ಆಗುತ್ತಿದೆ. ಇಂದು ದಾವಣಗೆರೆಯಲ್ಲಿ ಮಹಾಸಂಗಮ ಕಾರ್ಯಕ್ರಮದ ಮೂಲಕ ಒಂದು ಹಂತದ ಪ್ರಚಾರ ಕಾರ್ಯ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಅಭ್ಯರ್ಥಿಗಳ ಆಯ್ಕೆ ವಿಷಯಕ್ಕೆ ಅಮಿತ್ ಶಾ ಆದ್ಯತೆ ನೀಡುತ್ತಿದ್ದಾರೆ.

ನಾಳೆ ರಾತ್ರಿ 8.30ಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಅಮಿತ್ ಶಾ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಸಮಿತಿಗಳು ಕಳುಹಿಸಿಕೊಟ್ಟಿರುವ ಮೂರು ಹೆಸರುಗಳ ಕುರಿತು ಪರಾಮರ್ಶೆ ನಡೆಸಲಿದ್ದು, ಎಷ್ಟು ಜನ ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಕು, ಯಾವ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು, ನಮ್ಮ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗೆ ಅವಕಾಶ ನೀಡಬೇಕೋ ಅಥವಾ ಹೊಸಬರಿಗೆ ಅವಕಾಶ ನೀಡಬೇಕೋ ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತದೆ. ಎಷ್ಟು ಜನ ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಮೊದಲು ಅಂತಿಮಗೊಳಿಸಿ ನಂತರ ಉಳಿದ ಕ್ಷೇತ್ರಗಳಿಗೆ ಎರಡು ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ರಾಜ್ಯ ಕೋರ್ಟ್ ಕಮಿಟಿ ಅಂತಿಮಗೊಳಿಸುವ ಆಕಾಂಕ್ಷಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಿದ್ದು, ಪಕ್ಷದ ಅತ್ಯುನ್ನತ ಮಂಡಳಿಯಾಗಿರುವ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಚರ್ಚಿಸಿ ಚುನಾವಣಾ ಸಮಿತಿಯಲ್ಲಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕಳೆದ ಬಾರಿ ನಾಲ್ಕು ಹಂತದಲ್ಲಿ ಪಟ್ಟಿಯನ್ನು ಬಿಡಗಡೆ ಮಾಡಲಾಗಿತ್ತು. ಈ ಬಾರಿ ಕನಿಷ್ಟ ಮೂರು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡುವ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನೊಂದು ವಾರದಲ್ಲಿ ಚುನಾವಣಾ ದಿನಾಂಕ ಪ್ರಕಟಗೊಳ್ಳುವ ಎಲ್ಲಾ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ನಾಳೆಯೇ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸಿಕೊಡಲಾಗುತ್ತದೆ ಎನ್ನಲಾಗಿದೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಪಟ್ಟಿ ಬಿಡುಗಡೆ ಮಾಡಲಿದೆ. ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಿರೀಕ್ಷೆಯಂತೆ ಈ ಬಾರಿಯೂ ಹಿರಿಯ ನಾಯಕ ಯಡಿಯೂರಪ್ಪ ಬಣ ಹಾಗು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಣ ಎನ್ನುವ ವಿಚಾರ ಟಿಕೆಟ್ ಹಂಚಿಕೆಯಲ್ಲಿ ಬರಲಿದ್ದು, ತಮ್ಮ ತಮ್ಮ ಬಣದವರಿಗೆ ಟಿಕೆಟ್ ಕೊಡಿಸಲು ಇಬ್ಬರು ನಾಯಕರೂ ಪ್ರಯತ್ನ ನಡೆಸಲಿದ್ದಾರೆ.

ಅಮಿತ್ ಶಾ ರಾಜ್ಯ ಪ್ರವಾಸ:ಇಂದು ಸಂಜೆ 5.20ಕ್ಕೆ ಬೀದರ್ ವಾಯುನೆಲೆಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಯುಪಡೆ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 10.30ರಿಂದ 12.30ರವರೆಗೆ ಬೀದರ್​ನ ಗೊರಟ ಮೈದಾನದಲ್ಲಿ 103 ಅಡಿ ಎತ್ತರದ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ನಂತರ ಗೊರಟ ಶಾಹೀದ್ ಸ್ಮಾರಕ ಮತ್ತು ಸರ್ಧಾರ್ ವಲ್ಲಭಭಾಯ್ ಪಟೇಲ್ ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ.

ಮಧ್ಯಾಹ್ನ 1.45 ರಿಂದ 2.45ರವರೆಗೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಗಬ್ಬೂರ್​ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 4 ಗಂಟೆಗೆ ಬೀದರ್ ವಿಮಾನ ನಿಲ್ದಾಣದಿಂದ ಹೊರಟು 5 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಂಜೆ 6.30 ರಿಂದ 7.30 ರವರೆಗೆ ವಿಧಾನಸೌಧದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ ಮತ್ತು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಬಳಿಕ ಬೆಂಗಳೂರು ಉತ್ಸವ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ರಾತ್ರಿ 8.30 ರಿಂದ 9.30 ರವರೆಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿಯೇ ವಾಸ್ತವ್ಯ ಹೂಡಲಿರುವ ಅಮಿತ್ ಶಾ, ಮಾರ್ಚ್ 27 ರಂದು ಬೆಳಗ್ಗೆ 9 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ವಾಪಸ್ಸಾಗಲಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿರುವ ವೈಶಿಷ್ಟ್ಯಗಳೇನು ಗೊತ್ತಾ?

ABOUT THE AUTHOR

...view details