ಬೆಂಗಳೂರು:ಕೋವಿಡ್ ಸಮಯದಲ್ಲಿ ಕರ್ನಾಟಕವು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದೆ. ಈವರೆಗೆ ಸುಮಾರು 2.5 ಲಕ್ಷ ಆರೋಗ್ಯ ಸಿಬ್ಬಂದಿಗೆ ತಂತ್ರಜ್ಞಾನದ ಮೂಲಕವೇ ತರಬೇತಿ ನೀಡಲಾಗಿದೆ. ಇದು ಉಳಿದ ರಾಜ್ಯಗಳಿಗೂ ಮಾದರಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸ್ಟೆಪ್ ಒನ್ ಸಂಸ್ಥೆಯ ಸಹಯೋಗದಲ್ಲಿ ಕೋವಿಡ್ ರೋಗಿಗಳ ಮನೆ ಐಸೋಲೇಶನ್ಗೆ ಸಂಬಂಧಿಸಿದಂತೆ 10,000 ವೈದ್ಯ, ಆಯುಷ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್ ಮೊದಲ ಅಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಹೊಸ ವೈರಾಣು ಕುರಿತು ತರಬೇತಿ ನೀಡಬೇಕಿತ್ತು. ಆದರೆ ಲಾಕ್ ಡೌನ್ ಮೊದಲಾದ ಕಾರಣಗಳಿಂದಾಗಿ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ನೆರವಿನಲ್ಲಿ ತಂತ್ರಜ್ಞಾನ ಬಳಸಿ 2.5 ಲಕ್ಷ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಈ ಬಗೆಯ ಪರಿಣಾಮಕಾರಿ ತಂತ್ರಜ್ಞಾನ ಬಳಕೆಯನ್ನು ಕೇಂದ್ರ ಸರ್ಕಾರ ಕೂಡ ಗುರುತಿಸಿದೆ.
5ಟಿ ಕ್ರಮವನ್ನು ಕೂಡ ಯಶಸ್ವಿಯಾಗಿ ಜಾರಿ ಮಾಡಲಾಗಿದೆ. 3ನೇ ಅಲೆಯಲ್ಲಿ 2-3 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದರೂ ತೀವ್ರತೆ ಕಡಿಮೆ ಇದೆ. ಶೇ 93ರಷ್ಟು ರೋಗಿಗಳು ಮನೆ ಐಸೋಲೇಶನ್ನಲ್ಲೇ ಇದ್ದಾರೆ. 5 ರಿಂದ 6ರಷ್ಟು ಜನರು ಆಸ್ಪತ್ರೆ ಹಾಗೂ ಶೇ 1 ರಷ್ಟು ಜನರು ಕೋವಿಡ್ ಕೇರ್ ಸೆಂಟರ್ನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.