ಬೆಂಗಳೂರು: ಇಂದು ರಾಜ್ಯ ಚುನಾವಣೆ ರಣಕಣದ ಕ್ಲೈಮ್ಯಾಕ್ಸ್ ಹಂತ. 224 ಮತಕ್ಷೇತ್ರಗಳಿಗೆ ಇಂದು ಬೆಳಗ್ಗೆಯಿಂದ ಸಂಜೆವರೆಗೂ ಮತದಾನ ನಡೆಯಲಿದೆ. ಜಿದ್ದಾಜಿದ್ದಿನ ಗದ್ದುಗೆ ಗುದ್ದಾಟಕ್ಕೆ ಮತದಾರ ಅಂತಿಮ ಹಣೆಬರಹ ಬರೆಯಲಿದ್ದಾನೆ. ಬುಧವಾರ 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇಂದು ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ಮತದಾನ ನಡೆಯಲಿದೆ. ಜಿದ್ದಾಜಿದ್ದಿನ ಗದ್ದುಗೆ ಹೋರಾಟಕ್ಕೆ ಈ ಮೂಲಕ ತೆರೆ ಬೀಳಲಿದೆ. ಕಳೆದ 40 ದಿನಗಳ ಕಾಲ ರಾಜಕೀಯ ಪಕ್ಷಗಳ ಹೈ ವೋಲ್ಟೇಜ್ ಪ್ರಚಾರದ ಬಳಿಕ ಮತಪ್ರಭುಗಳು ಇಂದು ತಮ್ಮ ಮತಚಲಾವಣೆ ಮಾಡಲಿದ್ದಾರೆ.
ರಣಕಣದಲ್ಲಿ 2 615 ಅಭ್ಯರ್ಥಿಗಳು ಸ್ಪರ್ಧೆ:ಚುನಾವಣೆಯ ರಣಕಣದಲ್ಲಿ ಒಟ್ಟು 2,615 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಈ ಪೈಕಿ 2,430 ಪುರುಷ ಅಭ್ಯರ್ಥಿಗಳಾಗಿದ್ದರೆ, 184 ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಒಬ್ಬರು ಇತರ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಪಕ್ಷ 224 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ. ಕಾಂಗ್ರೆಸ್ 223 ಹುರಿಯಾಳುಗಳನ್ನು ಕಣಕ್ಕಿಳಿಸಿದೆ. ಇನ್ನು ಜೆಡಿಎಸ್ ಪಕ್ಷದಿಂದ ಒಟ್ಟು 209 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಆಮ್ ಆದ್ಮಿ ಪಾರ್ಟಿಯಿಂದ 209 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಎಸ್ಪಿಯಿಂದ 133 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯಿಂದ 195 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷದಿಂದ 110 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 254 ಇತರ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿದ್ದಾರೆ. 918 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಜ್ಯದ ಮತದಾರರು:ಈ ಬಾರಿ ಒಟ್ಟು 5,30,85,566 ಮತದಾರರಿದ್ದಾರೆ. 2,66,82,156 ಪುರುಷ ಮತದಾರರು ಇದ್ದರೆ, 2,63,98,483 ಮಹಿಳಾ ಮತದಾರರು ಇದ್ದಾರೆ. 4,027 ಇತರ ಮತದಾರರು ಇದ್ದಾರೆ. ಈ ಪೈಕಿ ಒಟ್ಟು 11,71,558 ಯುವ ಮತದಾರು ಇದ್ದಾರೆ.
ವಿಶೇಷಚೇತನ ಮತದಾರರ ಸಂಖ್ಯೆ 5,71,281 ಇದೆ. ಈ ಪೈಕಿ 18,811 ವಿಶೇಷ ಚೇತನರು ಮನೆಯಿಂದ ಮತ ಚಲಾಯಿಸಿದ್ದಾರೆ. ಇನ್ನು ಒಟ್ಟು 12,15,920ರ 80 ವರ್ಷ ಮೇಲ್ಪಟ್ಟ ಮತದಾರರು ಇದ್ದು, ಈ ಪೈಕಿ 76,120 ಹಿರಿಯರು ಮನೆಯಿಂದ ಮತಚಲಾವಣೆ ಮಾಡಿದ್ದಾರೆ.
ಒಟ್ಟು ಮತಗಟ್ಟೆ ಎಷ್ಟು?:ರಾಜ್ಯಾದ್ಯಂತ ಒಟ್ಟು 58,545 ಮತಗಟ್ಟೆಗಳಿವೆ. ಈ ಪೈಕಿ 2,258 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 996 ಮಹಿಳೆಯರಿಗಾಗಿ ಪ್ರತ್ಯೇಕ ಸಖಿ ಮತಗಟ್ಟೆಗಳಾಗಿವೆ. ವಿಶೇಷ ಚೇತನರಿಗೆ 239, ಯುವ ಮತದಾರರಿಗೆ 286, ಸ್ಥಳೀಯ ವಿಷಯಾಧಾರಿತ ಒಟ್ಟು 623 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 114 ಬುಡಗಟ್ಟು ಮತದಾರರಿಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ವಿಶೇಷ ಚೇತನ ಮತದಾರರಿಗೆ 45,823 ಗಾಲಿಕುರ್ಚಿ, 46,872 ಭೂತಗನ್ನಡಿ, 1,068 ಸಂಜ್ಞಾ ಭಾಷಾಂತಕಾರರು, ಒಟ್ಟು 54,950 ಸಹಾಯಕರನ್ನು ನಿಯೋಜಿಸಲಾಗಿದೆ.
ಎಡಗೈ ತೋರು ಬೆರಳಿಗೆ ಶಾಯಿ :ಈ ಬಾರಿ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ. ಅಳಿಸಲಾಗದ ಈ ಶಾಯಿಯನ್ನು ಹಚ್ಚಲಾಗುತ್ತದೆ.
ಇವಿಎಂ-ವಿವಿಪ್ಯಾಟ್ ವಿವರ:ಈ ಬಾರಿ ಒಟ್ಟು ಒಟ್ಟು 62,988 ಬ್ಯಾಲೆಟ್ ಯುನಿಟ್ ಹಾಗೂ 58,545 ಕಂಟ್ರೋಲ್ ಯುನಿಟ್ ಗಳನ್ನು ಮತಯಂತ್ರಕ್ಕೆ ಹಂಚಿಕೆ ಮಾಡಲಾಗಿದೆ. ಒಟ್ಟು 58,545 ವಿವಿ ಪ್ಯಾಟ್ ಗಳನ್ನು ಹಂಚಲಾಗಿದೆ.
ಮತದಾನಕ್ಕೆ ಪರ್ಯಾಯ ದಾಖಲೆಗಳು: ಚುನಾವಣೆ ಆಯೋಗ ನಿಗದಿಪಡಿಸಿರುವ ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
-ಆಧಾರ್ ಕಾರ್ಡ್
-ನರೇಗಾ ಉದ್ಯೋಗ ಗುರುತಿನ ಚೀಟಿ
-ಅಂಚೆ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ನೀಡಿರುವ ಭಾವಚಿತ್ರ ಇರುವ ಪಾಸ್ ಪುಸ್ತಕ
- ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
-ಡ್ರೈವಿಂಗ್ ಲೈಸೆನ್ಸ್
-ಪ್ಯಾನ್ ಕಾರ್ಡ್
-ಆರ್‌ಜಿಐ ಮತ್ತು ಎನ್‌ಪಿಆರ್ ಮೂಲಕ ನೀಡಿರುವ ಸ್ಮಾರ್ಟ್ ಕಾರ್ಡ್
-ಭಾರತದ ಪಾಸ್‌ಪೋರ್ಟ್
-ಭಾವಚಿತ್ರ ಹೊಂದಿರುವ ಪಿಂಚಣಿ ಕಾರ್ಡ್
-ಕೇಂದ್ರ/ರಾಜ್ಯ/ಪಿಎಸ್‌ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ
- ಲೋಕಸಭಾ ಸದಸ್ಯರು/ರಾಜ್ಯಸಭಾ ಸದಸ್ಯರು ಶಾಸಕರು/ವಿಧಾನಸಭಾ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
- ವಿಶಿಷ್ಟ ಅಂಗವೈಕಲ್ಯ ಕಾರ್ಡ್
ಇದನ್ನೂಓದಿ:ಮತದಾನದ ಪ್ರಮಾಣ ಹೆಚ್ಚಿಸಲು ತಂತ್ರಜ್ಞಾನದ ಮೊರೆ ಹೋದ ಚುನಾವಣಾ ಆಯೋಗ; ಆ್ಯಪ್ ಮೂಲಕ ಮತಗಟ್ಟೆ ಕ್ಯೂ ಸ್ಥಿತಿಗತಿ ಮಾಹಿತಿ