ಬೆಂಗಳೂರು: ರಾಜಸ್ಥಾನದ ನಂತರ ದೇಶದಲ್ಲಿ ಹೆಚ್ಚಿನ ಒಣಭೂಮಿ ಪ್ರದೇಶವನ್ನು ಹೊಂದಿರುವ ಎರಡನೇ ರಾಜ್ಯ ಎಂದರೆ ಅದು ಕರ್ನಾಟಕ. ರಾಜ್ಯದಲ್ಲಿ ಸುಮಾರು ಶೇ.60 ರಷ್ಟು ಸಾಗುವಳಿ ಪ್ರದೇಶದಲ್ಲಿ ಮಳೆಯಾಶ್ರಿತ ಕೃಷಿ ಇದ್ದು, ಶೇ.34ರಷ್ಟು ಪ್ರದೇಶ ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ.
ರಾಜ್ಯದಲ್ಲಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಯೋಜನೆಯನ್ನು 2003-04 ರಿಂದಲೂ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಹನಿ ಮತ್ತು ತುಂತುರು ನೀರಾವರಿ ಘಟಕಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ.
2005-06 ರಿಂದ ಕೇಂದ್ರ ಸರ್ಕಾರವು ಸಹ ಸೂಕ್ಷ್ಮ ನೀರಾವರಿ ಕಾರ್ಯಕ್ರಮಕ್ಕೆ ಸಹಾಯಧನ ಒದಗಿಸುತ್ತಿದೆ. 2015-16ನೇ ಸಾಲಿನಿಂದ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯ ಘಟಕದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಅನುಷ್ಠಾನ ಮಾರ್ಗಸೂಚಿಗಳನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಮತ್ತು ಒಟ್ಟು ಶೇಕಡಾವಾರು ಸಹಾಯಧನದ ಪಾಲಿನ ವಿವರಗಳು ಈ ಕೆಳಗಿನಂತಿದೆ.
ತುಂತುರು ನೀರಾವರಿ : ಸಣ್ಣ/ಅತಿ ಸಣ್ಣ ಯೋಜನೆಗೆ ಕೇಂದ್ರದ ಪಾಲು - ಶೇ.33, ರಾಜ್ಯದ ಪಾಲು-ಶೇ.57. ಇತರ ಯೋಜನೆಗೆ ಕೇಂದ್ರದ ಪಾಲು-ಶೇ.27, ರಾಜ್ಯದ ಪಾಲು-ಶೇ.63 ಸೇರಿ ಶೇ.90ರಷ್ಟು ಸಹಾಯಧನ ದೊರೆಯುತ್ತದೆ.
ಹನಿ ನೀರಾವರಿ ಘಟಕಕ್ಕೆ ಕೇಂದ್ರದ ಪಾಲು-ಶೇ.33, ರಾಜ್ಯದ ಪಾಲು ಶೇ.57. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಕೇಂದ್ರದ ಪಾಲು-ಶೇ.27, ರಾಜ್ಯದ ಪಾಲು-ಶೇ.63 ಹಾಗೂ ಇತರ(ಸಾಮಾನ್ಯ): ಕೇಂದ್ರದ ಪಾಲು-ಶೇ.27, ರಾಜ್ಯದ ಪಾಲು-ಶೇ.18 ಸೇರಿ ಒಟ್ಟು 45ರಷ್ಟು ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? : ಸೂಕ್ಷ್ಮ ನೀರಾವರಿ ಘಟಕವನ್ನು ಸಹಾಯಧನದ ಪಡೆಯಲು ಒಮ್ಮೆ ಮಾತ್ರ ಅವಕಾಶ ಇರುವುದರಿಂದ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಅರ್ಜಿಯನ್ನು ಪರಿಶೀಲಿಸಿ ದೃಢೀಕರಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ನಿಗದಿಪಡಿಸಿರುವ ಯೋಜನೆಯ ಮಾರ್ಗಸೂಚಿಯನ್ವಯ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಎಲ್ಲ ವರ್ಗದ ರೈತರಿಗೆ ಪ್ರತಿ ರೈತನಿಗೆ 5 ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ಪಡೆಯಬಹುದು.
ಮೊದಲ, ಎರಡು ಹೆಕ್ಟರ್ ಪ್ರದೇಶದವರೆಗೆ ಶೇ.45 ರಿಂದ ಶೇ.90ರಷ್ಟು ಸಹಾಯಧನ ಹಾಗೂ ಎರಡು ಹೆಕ್ಟೇರ್ಗಿಂತ ಮೇಲ್ಪಟ್ಟು 5 ಹೆಕ್ಟೇರ್ ಪ್ರದೇಶದವರೆಗೆ ಶೇ.45ರಷ್ಟು ಸಹಾಯಧನ ನೀಡಲಾಗುತ್ತದೆ. ಸರ್ಕಾರದಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಪಡೆದಂತಹ ಹನಿ ಮತ್ತು ತುಂತುರು ನೀರಾವರಿ ಘಟಕಗಳು ಮಾತ್ರ ಸಹಾಯಧನ ಪಡೆಯಲು ಅರ್ಹವಾಗಿರುತ್ತವೆ.
ನೀರಿನ ಮೂಲವನ್ನು ಹೊಂದಿರುವ ರೈತರು ಮಾತ್ರ ಲಘು ನೀರಾವರಿ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಮುಂಗಾರು ಆರಂಭವಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದರಿಂದ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ರೈತರಿಗಾಗಿ ಹಲವು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರು ತಮ್ಮ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿ ಈ ಕೆಳಗಿನ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.