ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಪ್ರಭಾವ ಕಡಿಮೆ ಆಗಿದೆ. ಈ ಬೆನ್ನಲ್ಲೇ ನಾಲ್ಕನೇ ಅಲೆ ಎಚ್ಚರಿಕೆಯನ್ನ ಆರೋಗ್ಯ ಇಲಾಖೆ ನೀಡಿದೆ. ಪ್ರಸ್ತುತ ಕೋವಿಡ್-19 ರೋಗಿಗಳಲ್ಲಿ ಹೊಸ ರೋಗ ಲಕ್ಷಣಗಳು ಹಾಗೂ ವಿಭಿನ್ನ ರೋಗ ಲಕ್ಷಣಗಳನ್ನು ಕಂಡು ಹಿಡಿಯಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ.
ಇದಕ್ಕಾಗಿ ಆರಂಭಿಕ ಹಂತದಲ್ಲೇ ರೋಗದ ಲಕ್ಷಣಗಳನ್ನ ಗುರುತಿಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸರ್ವಿಲೆನ್ಸ್ ಆರಂಭಿಸಿದೆ. ಮಾರ್ಚ್ 16ರಂದು ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯ ಸೂಚನೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೋವಿಡ್ 1ನೇ, 2ನೇ ಮತ್ತು 3ನೇ ಅಲೆಯಲ್ಲಿ ವೈರಸ್ನ ರೋಗಲಕ್ಷಣಗಳು ಪ್ರತಿ ಹಂತದಲ್ಲೂ ವಿಭಿನ್ನ ರೀತಿಯಲ್ಲಿ ಬದಲಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಓಮಿಕ್ರಾನ್ ಸ್ವಭಾವವನ್ನ ದಕ್ಷಿಣ ಆಫ್ರಿಕಾದ ವೈದ್ಯರು ಗುರುತಿಸಿದ್ದರು. ಹೀಗಾಗಿ, ಪರಿಣಾಮಕಾರಿಯಾಗಿ ವೈರಸ್ನ ವಿರುದ್ಧ ಹೋರಾಡಲು ಸಹಕಾರಿಯಾಗಿತ್ತು.