ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡನೇ ಹಂತದ ಲಸಿಕೆ ವಿತರಣೆ ಆರಂಭವಾಗಿದೆ. ಪಾಲಿಕೆ ಕೇಂದ್ರ ಕಚೇರಿ ಆವರಣದ ಗಾಜಿನ ಮನೆಯಲ್ಲಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಆಡಳಿತಗಾರರಾದ ಗೌರವ್ ಗುಪ್ತ ಲಸಿಕೆ ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೊದಲನೇ ಹಂತದ ಲಸಿಕೆ ವಿತರಣೆ ಇನ್ನೂ ಬಾಕಿ ಇದ್ದರೂ 2ನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ 1,435 ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಲಸಿಕೆ ವಿತರಣೆಯಾಗಲಿದೆ. ಪೌರಕಾರ್ಮಿಕರು, ಕಂದಾಯ, ಪೊಲೀಸ್ ಇಲಾಖೆ ಸೇರಿ ಒಟ್ಟು 60,000ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಲಸಿಕೆ ಪಡೆಯಲು ನೋಂದಣಿಯಾಗಿದ್ದಾರೆ.
ಲಸಿಕೆ ಪಡೆದ ಬಳಿಕ ಮಾತನಾಡಿದ, ಆಡಳಿತಾಧಿಕಾರಿ ಗೌರವ್ ಗುಪ್ತಾ ಬಿಬಿಎಂಪಿ ವ್ಯಾಪ್ತಿಯ ಫ್ರಂಟ್ ಲೈನ್ ವರ್ಕರ್ಸ್ಗೆ ಲಸಿಕೆ ಹಾಕಲಾಗುತ್ತದೆ. ಆರೋಗ್ಯ ಕಾರ್ಯಕರ್ತರ ಲಸಿಕೆ ವಿತರಣೆಯೂ ಮುಂದುವರಿಯಲಿದೆ. ಇದರ ಜೊತೆಗೆ ಎರಡನೇ ಹಂತದ ಲಸಿಕೆ ಅಭಿಯಾನ ಆರಂಭವಾಗಿದೆ . ಟಾರ್ಗೆಟ್ ರೀಚ್ ಆಗಲು ಉತ್ತೇಜನ ಮಾಡುವ ಅಗತ್ಯ ಇದೆ . ಹೀಗಾಗಿ ನಾವು ಇವತ್ತು ಲಸಿಕೆ ಪಡೆಯುವ ಮೂಲಕ ಪ್ರೇರಣೆಯಾಗುತ್ತೇವೆ ಎಂದರು.