ಬೆಂಗಳೂರು: ಪಂಚ ಗ್ಯಾರಂಟಿಗಳ ಷರತ್ತುಗಳನ್ನು ಪ್ರಶ್ನಿಸಿ ನಿಯಮ 59 ರ ಅಡಿ ಚರ್ಚೆಗೆ ಅವಕಾಶ ಕೋರಿ ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆಗೆ ಆಡಳಿತಾರೂಢ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಉಭಯ ಪಕ್ಷಗಳಿಂದ ನಿಲುವಳಿ ಸೂಚನೆ ಪರಿಷ್ಕಾರ ಪರ ಮತ್ತು ವಿರುದ್ಧದ ಸಮರ್ಥನೆ ಆಲಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಾಹ್ನದ ಕಲಾಪದಲ್ಲಿ ರೂಲಿಂಗ್ ನೀಡುವುದಾಗಿ ತಿಳಿಸಿ ಕಲಾಪ ಮುಂದೂಡಿಕೆ ಮಾಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿ ವಿಷಯ ಪ್ರಸ್ತಾಪಕ್ಕೆ ಅನುಮತಿ ಕೋರಿತು. ಬಿಜೆಪಿ ನಿಲುವಳಿ ಸೂಚನೆ ಮಂಡನೆ ಕುರಿತು ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ಗ್ಯಾರಂಟಿ ವಿಷಯಗಳ ಮೇಲೆ ನಿಲುವಳಿ ಸೂಚನೆ ಕೊಟ್ಟಿರುವುದು ಆಶ್ಚರ್ಯವಾಯಿತು. ತುಂಬಾ ಅನುಭವ ಇರುವ ನಾಯಕರು ಇವರು. ನನಗೆ ಈ ಸದನದಲ್ಲಿ ವಿಶೇಷ ಅನುಭವ ಮಾರ್ಗದರ್ಶನ ಆಗಿದೆ.
ತಾವು ಕೊಟ್ಟಿರುವ ನಿಲುವಳಿ ಸೂಚನೆ ಅಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಪ್ಯಾರಾ 9 ರಿಂದ 16 ರವರೆಗೆ ಮಾಡಿರುವ ವಿಷಯದ ಬಗ್ಗೆಯೇ ಮಾತನಾಡಿದ್ದಾರೆ. ಗ್ಯಾರಂಟಿ ವಿಚಾರ ಅಲ್ಲಿ ಹೇಳಿದ್ದಾರೆ. ಹಾಗಾಗಿ ನಿಲುವಳಿ ಸೂಚನೆ ಅಗತ್ಯ ಇಲ್ಲ. ಕಾನೂನು ರೀತಿ ಬರಲಿದೆಯಾ ಎನ್ನುವುದನ್ನು ಪರಿಶೀಲಿಸಿ ನೋಡಿ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಎಲ್ಲ ಬರಲಿದೆ. ಹಾಗಾಗಿ ಈ ನಿಲುವಳಿ ಸೂಚನೆ ಒಪ್ಪಬಾರದು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಒಂದು ನಿಲುವಳಿಯಲ್ಲಿ ಒಂದಕ್ಕಿಂತ ಹೆಚ್ಚು ವಿಷಯ ಇರಬಾರದು. ನೀವು ಏಳು ವಿಷಯ ಹೇಳಿದ್ದೀರಿ ನೋಡಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ರೂಲ್ ಬುಕ್ ಓದಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋಟಾ ಶ್ರೀನಿವಾಸ ಪೂಜಾರಿ, ಒಂದೇ ವಿಷಯದ ಮೇಲೆ ನಿಲುವಳಿ ಸೂಚನೆ ಇದೆ. ಪ್ರಿಲಿಮಿನರಿ ಸಬ್ಮಿಷನ್ಗೆ ಅವಕಾಶ ಕೊಡಿ ವಿವರಣೆ ನೀಡುತ್ತೇನೆ ಎಂದರು.
ಸಭಾಪತಿಗಳ ಅವಕಾಶ ಪಡೆದು ನಿಲುವಳಿ ಮಂಡನೆ ಪ್ರಸ್ತಾವನೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಜನತಂತ್ರ ವ್ಯವಸ್ಥೆಯಲ್ಲಿ ಜನರು ರಾಜಕೀಯ ಪಕ್ಷಗಳ ಭರವಸೆ ಪರಾಮರ್ಶೆ ಮಾಡುತ್ತಾರೆ. ಅದರಂತೆ ಈಗ ಸಿದ್ದರಾಮಯ್ಯ ಸರ್ಕಾರ ಬಂದಿದೆ. ಇಡೀ ರಾಜ್ಯಕ್ಕೆ ಐದು ಗ್ಯಾರಂಟಿ ಜನಸಾಮಾನ್ಯರಿಗೆ ಕೊಡುತ್ತೇವೆ ಎಂದಿದ್ದಾರೆ. ಅದರ ಆಧಾರದಲ್ಲಿ ಇವರು ಗೆದ್ದು ಬಂದಿದ್ದಾರೆ. ಅಂದು ಗ್ಯಾರಂಟಿ ಕೊಡುವಾಗ ಉಲ್ಲೇಖಗಳನ್ನು ಮಾಡಿದ್ದಾರೆ. ಮೊದಲನೆಯದ್ದು ಅನ್ನ ಭಾಗ್ಯ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಆದರೆ ಇವರು ಒಂದು ಕೆಜಿಯನ್ನೂ ಕೊಟ್ಟಿಲ್ಲ. ಕೇಂದ್ರದ ಐದು ಕೆಜಿ ಮಾತ್ರ ಕೊಡುತ್ತಿದ್ದೀರಿ. ಇದನ್ನೇ ನಮ್ಮದು ಎನ್ನುತ್ತಿದ್ದೀರಿ. ಇದು ಸರಿಯಲ್ಲ. ಈಗ ಐದು ಕೆಜಿಗೆ ಹಣ ಕೊಡಲು ಹೊರಟಿದ್ದೀರಿ. ನೀವು ಹೇಳಿದ್ದು 10 ಕೆಜಿ ಹಣ 5 ಕೆಜಿಗೆ ಮಾತ್ರ. ಅದೂ ಕೂಡ ಕೆಜಿಗೆ 34 ರೂ. ಅಷ್ಟು ಹಣಕ್ಕೆ ಎಲ್ಲಿಯೂ ಅಕ್ಕಿ ಸಿಕ್ಕಿಲ್ಲ. ಇದರ ಬಗ್ಗೆ ಚರ್ಚೆ ಮಾಡಬೇಕು. ಅದಕ್ಕಾಗಿ ನಿಲುವಳಿ ಸೂಚನೆ ಮಾಡಿದ್ದೇವೆ ಎಂದರು.
ಶಕ್ತಿ ಯೋಜನೆಗೆ ಐದು ಸಾವಿರ ಹೆಚ್ಚು ಬಸ್ ಬಿಡಬೇಕಿದೆ: ಎರಡನೇ ಗ್ಯಾರಂಟಿ ಉಚಿತ ವಿದ್ಯುತ್. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಎಂದು ಈಗ ಶೇಕಡಾವಾರು ಲೆಕ್ಕ ತೆಗೆಯುತ್ತೇವೆ ಎನ್ನುತ್ತಿದ್ದೀರಿ. ನಿಮ್ಮ ಗ್ಯಾರಂಟಿಗೂ ಈಗ ಹಾಕಿರುವ ಷರತ್ತುಗಳಿಗೂ ಸಂಬಂಧ ಇಲ್ಲ. ಇದರ ಬಗ್ಗೆ ಚರ್ಚೆ ಆಗಬೇಕು. ನಾವು ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿ ಕೊಟ್ಟಿರಲಿಲ್ಲ. ಆದರೂ ನಮ್ಮ ಮೇಲೆ ಆರೋಪ ಮಾಡುತ್ತಿದ್ದೀರಾ?. ಮೂರನೇ ಗ್ಯಾರಂಟಿ ಶಕ್ತಿ ಯೋಜನೆ. 21 ಸಾವಿರ ಬಸ್ ಯೋಜನೆ ವ್ಯಾಪ್ತಿಗೆ ಬರುತ್ತವೆ. 18 ಸಾವಿರ ಬಸ್ ಸಂಚರಿಸುತ್ತಿವೆ. ಮಹಿಳೆಯರ ಉಚಿತ ಪ್ರಯಾಣದಿಂದ ವಿದ್ಯಾರ್ಥಿಗಳಿಗೆ ಬಸ್ ಸಿಗದಂತಾಗಿದೆ. ಶಕ್ತಿ ಯೋಜನೆಗೆ ಐದು ಸಾವಿರ ಹೆಚ್ಚು ಬಸ್ ಬಿಡಬೇಕಿದೆ. ಅದನ್ನು ಮಾಡದೆ ಯೋಜನೆ ಜಾರಿ ಮಾಡಿದ್ದಾರೆ. ಇದರಿಂದ ಬಸ್ಗಾಗಿ ಜನ ಪ್ರಯಾಸ ಪಡಬೇಕಿದೆ. ಇದನ್ನು ಸರ್ಕಾರದ ಗಮನಕ್ಕೆ ತರಬೇಕಿದೆ.