ಕರ್ನಾಟಕ

karnataka

By

Published : Jan 20, 2023, 10:46 PM IST

Updated : Jan 20, 2023, 11:02 PM IST

ETV Bharat / state

ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ: ಸ್ವಾಗತಿಸಿದ ಕಸಾಪ

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ - 10 880 ಎಂಟಿಎಸ್ ಹಾಗೂ 529 ಹವಾಲ್ದಾರ್ ಹುದ್ದೆ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ - ಪರಿಷತ್ತಿನ ಕಾನೂನು ಹೋರಾಟಕ್ಕೆ ಸಂದ ಜಯ - ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಸಂತಸ

Nadoja Dr Mahesh Joshi
ನಾಡೋಜ ಡಾ ಮಹೇಶ ಜೋಶಿ

ಬೆಂಗಳೂರು: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್‌ಸಿ) 2023ರ ಏಪ್ರಿಲ್‌ನಲ್ಲಿ ನಡೆಸುವ 11,409 ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಕನ್ನಡವೂ ಸೇರಿದಂತೆ ಒಟ್ಟು13 ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲೂ ಅವಕಾಶ ಕಲ್ಪಿಸಿರುವುದಕ್ಕೆ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾನೂನು ಕ್ರಮ ಸೇರಿದಂತೆ ನಿರಂತರ ಹೋರಾಟ ನಡೆಸುತ್ತ ಬಂದಿದೆ. ಪರಿಷತ್ತಿನ ಕಾನೂನು ಹೋರಾಟಕ್ಕೆ ಇದು ಸಂದ ಜಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದಲ್ಲಿ ಉದ್ಯೋಗ ಪಡೆಯಲು ಬಯಸುವ ಕನ್ನಡಿಗರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ಕಷ್ಟವಾಗುತ್ತಿತ್ತು. ಸಾಕಷ್ಟು ಜನರಿಗೆ ಇಂಗ್ಲೀಷ್​ ಭಾಷೆ ಸರಿಯಾಗಿ ಗೊತ್ತಿಲ್ಲ. ಹಿಂದಿ ಭಾಷೆಯೂ ಗೊತ್ತಿಲ್ಲ ಎನ್ನುವವರಿಗೆ ನಿಜಕ್ಕೂ ತೊಂದರೆಯಾಗುತ್ತಿದೆ ಎನ್ನುವ ಸಂಗತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಳೆದ 1 ವರ್ಷದಿಂದ ನಿರಂತರ ಕೇಂದ್ರ ಸರಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್‌ಸಿ) ಅಧಿಕಾರಿಗಳಿಗೆ ಮನದಟ್ಟು ಮಾಡುತ್ತ ಬಂದಿತು.

ಕೇಂದ್ರ ಎಸ್ಎಸ್ಸಿಗೆ ಕಸಾಪದಿಂದ ನೋಟಿಸ್: ಹಿಂದಿನ ವರ್ಷ ಎಸ್ಎಸ್ಸಿಗೆ ಕನ್ನಡ ಸಾಹಿತ್ಯ ಪರಿಷತ್ತು ಕಾನೂನು ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡುವುದಾಗಿಯು ಹೇಳಿತ್ತು. ಹಾಗೆಯೇ ಕೇಂದ್ರ ಸಚಿವರಿಗೂ ಪತ್ರ ಬರೆಯುವ ಮೂಲಕ ವಸ್ತುಸ್ಥಿತಿಯನ್ನು ಅವರ ಗಮನಕ್ಕೆ ತರಲಾಗಿತ್ತು. ಪರಿಷತ್ತು ನೀಡಿದ ಕಾನೂನು ನೋಟಿಸ್​​ಗೆ ಸೂಕ್ತವಾಗಿ ಸ್ಪಂದಿಸಿದ ಸಿಬ್ಬಂದಿ ನೇಮಕಾತಿ ಆಯೋಗವು ಕನ್ನಡಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದ್ದರು. ಅದರಂತೆ ಈಗ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಸರಕಾರ ವಿಧಾನ ಸಭೆಯಲ್ಲಿ ಮಂಡಿಸಿರುವ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ 2022 ರಲ್ಲಿಯೂ ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎನ್ನುವ ಅಂಶವಿದ್ದು ಆದಷ್ಟು ಬೇಗ ಈ ವಿಧೇಯಕವು ಕಾನೂನಾಗಿ ಪರಿವರ್ತಿತವಾಗಬೇಕೆನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಆಗ್ರಹವಾಗಿದೆ. ಇದರ ಜೊತೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೋರಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರು, ಮಾಧ್ಯಮದವರು ಸಹಕಾರ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟಿರುವುದನ್ನು ಸ್ಮರಿಸಿದ್ದಾರೆ.

ಬ್ಯಾಂಕ್‌ ಪರೀಕ್ಷೆಗಳು ಕನ್ನಡದಲ್ಲಿ: ಇನ್ನು ಮುಂದೆ ಕೇಂದ್ರ ಸರಕಾರದ ಕೆಲವೊಂದು ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಈಗ ದೊರಕುತ್ತಿದೆ. ಕೆಲವು ಬ್ಯಾಂಕ್‌ ಪರೀಕ್ಷೆಗಳನ್ನೂ ಕನ್ನಡದಲ್ಲಿ ಬರೆಯಬಹುದಾಗಿದೆ. ಎಸ್‌ಎಸ್‌ಎಲ್‌ಸಿ ಶೈಕ್ಷಣಿಕ ಅರ್ಹತೆ ಬಯಸುವ ಎಸ್‌ಎಸ್‌ಸಿ, ಎಂಟಿಎಸ್‌ ಮತ್ತು ಹವಾಲ್ದಾರ್‌ ಹುದ್ದೆಗಳಿಗೆ ಇಲ್ಲಿಯವರೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವೇ ಇರಲಿಲ್ಲ. ಇದೇ ಮೊದಲ ಬಾರಿಗೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಪರೀಕ್ಷೆ ಬರೆಯುವ ಅವಕಾಶ ದೊರಕಿದಂತಾಗಿದೆ ಎಂದು ತಿಳಿಸಿದ್ದಾರೆ.

10880 ಎಂಟಿಎಸ್ ಹುದ್ದೆ:ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿನ ಒಟ್ಟು 10,880 ಎಂಟಿಎಸ್ ಹುದ್ದೆಗಳಿಗೆ ಹಾಗೂ ಸುಂಕ ಮತ್ತು ಪರೋಕ್ಷ ತೆರಿಗೆಯ ಕೇಂದ್ರೀಯ ಮಂಡಳಿ (ಸಿಬಿಐಸಿ) ಮತ್ತು ನರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (ಸಿಬಿಎನ್)ನಲ್ಲಿನ 529 ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

11,409 ಹುದ್ದೆಗಳಿಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (ಎಂಟಿಎಸ್)‌ ಮತ್ತು ಹವಾಲ್ದಾರ್‌ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಸಹ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು 2023ರ ಫೆಬ್ರವರಿ 19 ರ ಮೊದಲು ಅರ್ಜಿ ಸಲ್ಲಿಸಬಹುದು. ಇದೇ ರೀತಿ ಅರ್ಜಿ ಶುಲ್ಕ ಪಾವತಿಗೆ ಫೆಬ್ರವರಿ 19 ಕೊನೆಯ ದಿನವಾಗಿದೆ.

ಅರ್ಜಿ ತಿದ್ದುಪಡಿಗೆ ಫೆಬ್ರವರಿ 23-24 ರಂದು ಅವಕಾಶವಿರುತ್ತದೆ. ಇದೇ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಕಂಪ್ಯೂಟರ್‌ ಆಧಾರಿತ ನೇಮಕಾತಿ ಪರೀಕ್ಷೆ ನಡೆಯಲಿದೆ. ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಿರುತ್ತಾರೆ, ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಿ ಇದರ ಲಾಭವನ್ನು ಹಚ್ಚಿನ ಕನ್ನಡಿಗರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.


ಕನ್ನಡಿಗರಿಗೆ ಮೀಸಲಾತಿ: ಈ ನಿರ್ಧಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಒಪ್ಪಿಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳುವಂತೆ ಸಿಬ್ಬಂದಿ ನೇಮಕಾತಿ ಆಯೋಗಕ್ಕೆ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಿಕೊಡಬೇಕೆಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಇದನ್ನೂಓದಿ:2023ರ ರಾಜ್ಯ ಚುನಾವಣೆ ಗಾಂಧಿ - ಗೋಡ್ಸೆ ಸಿದ್ದಾಂತದ ನಡುವಿನ ಹೋರಾಟ: ಬಿ ಕೆ ಹರಿಪ್ರಸಾದ್

Last Updated : Jan 20, 2023, 11:02 PM IST

ABOUT THE AUTHOR

...view details