ಬೆಂಗಳೂರು : 2019ರಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದು ತಮ್ಮ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶಾಸಕರು ಬಿಜೆಪಿ ತೊರೆಯದಂತೆ ನಿಗಾ ವಹಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿರುವ ಬೆನ್ನಲ್ಲೇ ಸದ್ದಿಲ್ಲದೇ 'ಆಪರೇಷನ್ ಹಸ್ತ' ಕಾರ್ಯಾಚರಣೆ ಬಿರುಸುಗೊಂಡಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪಕ್ಷ ತೊರೆಯದಂತೆ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಸೋಮವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಯಶವಂತಪುರ ವಿಧಾನಸಭಾ ಕ್ಷೇತ್ರದ ಅನ್ಯಪಕ್ಷಗಳ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಸ್.ಟಿ.ಸೋಮಶೇಖರ್ ಅಪಾರ ಬೆಂಬಲಿಗರು ಬಿಜೆಪಿ ತೊರೆದು ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಮೊದಲ ಹಂತದಲ್ಲಿ ಆಪರೇಷನ್ ಹಸ್ತ ತಳಮಟ್ಟದಲ್ಲಿ ಪ್ರಾರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿಯ ಇನ್ನಷ್ಟು ಮಂದಿ ಪಕ್ಷ ಸೇರುವ ಸಾಧ್ಯತೆಗಳು ದಟ್ಟವಾಗಿವೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳು ಮತ್ತು ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷರುಗಳು ಕಾಂಗ್ರೆಸ್ ಸೇರ್ಪಡೆಯಾದರು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಿ.ಹನುಮಂತಯ್ಯ, ರಾಜ್ಯ ಜಿಲ್ಲಾ ಕ್ರಶರ್ ಮಾಲೀಕರ ಸಂಘದ ಅಧ್ಯಕ್ಷ ಡಿ. ಸಿದ್ದರಾಜು, ಅಜ್ಜಂನಹಳ್ಳಿ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷರಾದ ರುದ್ರಪ್ಪ ಕಾಂಗ್ರೆಸ್ ಸೇರಿದರು. ಶಾಸಕರುಗಳಾದ ಆನೇಕಲ್ ಶಿವಣ್ಣ, ಶ್ರೀನಿವಾಸ್ ಈ ಬೆಳವಣಿಗೆಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ನೀವು ಕಾರ್ಯಕರ್ತರು. ಮತದಾರರ ಮನ ಗೆಲ್ಲುವತ್ತ ಗಮನ ಹರಿಸಿ. ನಾಯಕರ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷ ಕರ್ನಾಟಕದ ಜನರ ಬದುಕನ್ನು ರೂಪಿಸುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳು ತಲುಪದ ಜನರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಲು ಭಾರತ್ ಜೋಡೋ ಸಭಾಂಗಣದಲ್ಲಿ ನಾವೆಲ್ಲಾ ಜೊತೆಯಾಗಿದ್ದೇವೆ. ನಮ್ಮ ಬಂಧ ಗಟ್ಟಿಯಾಗಿ ಕೋಮುವಾದಿ ಶಕ್ತಿಗಳನ್ನು ಓಡಿಸೋಣ ಎಂದರು.
ಕಾಂಗ್ರೆಸ್ ಪಕ್ಷದ ರಕ್ತ ಸಾಮಾನ್ಯವಾದದ್ದಲ್ಲ ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ, ಕಾಂಗ್ರೆಸ್ಸಿಗನಾಗುವುದೆಂದರೆ ಅದು ಅಭಿಮಾನದ ಸಂಕೇತ. ಈ ರಾಷ್ಟ್ರ ಧ್ವಜ ಯಾರ ಹೆಗಲ ಮೇಲಿದೆ ಎಂದರೆ ಅದು ಕಾಂಗ್ರೆಸ್ಸಿಗರ ಹೆಗಲ ಮೇಲೆ ಮಾತ್ರ. ನಾವೆಲ್ಲ ಅಭಿಮಾನದಿಂದ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳಬೇಕು. ಈ ದೇಶದ ಬಡ ಜನರಿಗೆ ಅನುಕೂಲವಾಗುವಂತಹ ನೀತಿಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಉಳುವವನೇ ಭೂಮಿಯ ಒಡೆಯ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಪಡಿತರ ವ್ಯವಸ್ಥೆ, ಪಂಚಾಯತ್ ರಾಜ್ ಸೇರಿದಂತೆ ನಾವೆಲ್ಲಾ ಯಾವುದರ ಫಲಾನುಭವಿಗಳಾಗಿ ಬೆಳೆದಿದ್ದೇವೊ ಅದೆಲ್ಲ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಡಿಕೆಶಿ ಹೇಳಿದರು.
ಜನ ನೆನಪು ಮಾಡಿಕೊಳ್ಳುವಂತಹ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ ಬಿಜೆಪಿ. ಬರೀ ಬೆಲೆ ಏರಿಕೆ ಭಾಗ್ಯ ಕೊಟ್ಟಿದೆ. ಬಡವರ ಬಗ್ಗೆ ಚಿಂತೆ ಇಲ್ಲ, ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮೋದಿಯವರು ಗ್ಯಾಸ್ ಕೊಡುತ್ತೇನೆ ಎಂದು ಬಡ ಹೆಣ್ಣು ಮಕ್ಕಳ ಫೋಟೊ ಹಾಕಿದ್ದಷ್ಟೇ ಸಾಧನೆ. ಇದೇ ಕಾರಣಕ್ಕೆ ನಾವು ಜನರಿಂದ ಮಾಡುತ್ತಿರುವ ಲೂಟಿಯನ್ನು ತಡೆಯಲು ಗ್ಯಾರಂಟಿ ಯೋಜನೆಗಳನ್ನು ತಂದಿರುವುದು. ನೀವು ಇದನ್ನು ಮನೆ, ಮನಗಳಿಗೆ ತಲುಪಿಸಬೇಕು.