ಬೆಂಗಳೂರು: ವಿಧಾನಸಭೆ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಘಟಾನುಘಟಿ ನಾಯಕರು ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅಂಜನಾನಗರದ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು. ಸೋಮಶೇಖರ್ ಅವರಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೃಷ್ಣಪ್ಪ ಹಾಗೂ ಮುನಿರತ್ನ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸೋಮಶೇಖರ್, ಇಪ್ಪತ್ತು ವರ್ಷಗಳಿಂದ ನಾನು ಈ ಕ್ಷೇತ್ರದಲ್ಲಿ ಇದ್ದು, ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು. ಪಾದರಸದಂತೆ ಸಿಎಂ ಬಿಎಸ್ವೈ ಕೆಲಸ ಮಾಡುತ್ತಿದ್ದು, ಅವರ ಜೊತೆ ನಮ್ಮ ಕ್ಷೇತ್ರಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದರು. ನಾನ್ಯಾರು ಅಂತ ಕ್ಷೇತ್ರದ ಜನತೆಗೆ ಗೊತ್ತಿದೆ. ಅಭಿವೃದ್ಧಿ ಕಾರಣಕ್ಕಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದು, ನಾನು ಈ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.