ಬೆಂಗಳೂರು:ಪಕ್ಷ ಬಿಡುವ ಸುದ್ದಿ ಬೆನ್ನಲ್ಲೇ ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾಜಿ ಸಚಿವ ಸಿ.ಟಿ.ರವಿ ಅವರ ಜೊತೆ ಸಮಾಲೋಚನೆ ನಡೆಸಿದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಬ್ಬರು ನಾಯಕರು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, "ಸಿ.ಟಿ. ರವಿಯವರು ಬನ್ನಿ ಎಂದಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡಿ ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಹೇಳಿದ್ದೇನೆ" ಎಂದರು.
"ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದ ಸಭೆ ಬಗ್ಗೆ ಮಾಹಿತಿ ನನಗೆ ತಡವಾಗಿ ಸಿಕ್ಕಿತ್ತು. ನಿನ್ನೆ ನಾನು ಕ್ಷೇತ್ರದಲ್ಲಿ ಬೇರೆ ಬೇರೆ ಕಾರ್ಯಕ್ರಮ ಇದ್ದ ಕಾರಣದಿಂದ ಸಭೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಇಂದು ಸಂಜೆ ನಾಯಕರಾದ ಆರ್. ಅಶೋಕ್ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತೇನೆ. ನಾನು ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲಿ ಇದ್ದೇನೆ" ಎಂದು ಸ್ವಷ್ಟಪಡಿಸಿದರು.
ಬಿಜೆಪಿಗೆ ಎಸ್.ಟಿ. ಸೋಮಶೇಖರ್ ಅವರು ಗುಡ್ ಬೈ ಹೇಳಿ ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಇನ್ನು ಇತ್ತೀಚೆಗಷ್ಟೇ ಎಸ್.ಟಿ.ಸೋಮಶೇಖರ್ ಬೆಂಬಲಿಗರ ಸಭೆ ನಡೆಸಿದ್ದರು.
ಇದನ್ನೂ ಓದಿ:ತಾನು ಕಳ್ಳ, ಪರರನ್ನು ನಂಬು ಎನ್ನುವ ಸ್ಥಿತಿ ಬಿಜೆಪಿಯದ್ದು: ಡಿಸಿಎಂ ಡಿಕೆಶಿ ವಾಗ್ದಾಳಿ
ಹಸ್ತಕ್ಕೆ ಆಪರೇಷನ್ ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ - ಸಿ.ಟಿ.ರವಿ:ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ. ಹಸ್ತಕ್ಕೆ ಆಪರೇಷನ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನಾನೀಗ ಹೇಳುವುದಿಲ್ಲ ಎಂದಿದ್ದಾರೆ.
"ಅನಿಶ್ಚಿತತೆ, ಅರಾಜಕೀಯ ಪರಿಸ್ಥಿತಿ ಬಂದಾಗ ಶಾಸಕರಿಗೆ ಬಿಜೆಪಿಯೇ ಪರ್ಯಾಯ ಎನಿಸಿತ್ತು. ಈಗ ಪೂರ್ಣ ಬಹುಮತ ಇದೆ. ಅತಿಯಾಗಿ ಮಾಡಲು ಹೋದರೆ ಪರಿಸ್ಥಿತಿ ಕೆಟ್ಟದ್ದಾಗಲಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ಪಡೆದು ಆಡಳಿತ ನಡೆಸುತ್ತಿದೆ. ಒಳ್ಳೆಯ ಆಡಳಿತ ನಡೆಸುವ ಗುರಿ ಇಟ್ಟುಕೊಳ್ಳಬೇಕು. ಇಲ್ಲದೇ ಇರುವುದನ್ನು ಮಾಡಲು ಹೊರಟರೆ ಸುಮ್ಮನೆ ಕುಳಿತುಕೊಳ್ಳುವವರು ನಾವಲ್ಲ. ನಾವೇನಾದರೂ ಮಾಡಿದರೆ ಮೇಲೇಳಲು ಆಗಲ್ಲ. ನಾವೇನು ಮಾಡುತ್ತೇವೆಂದು ಹೇಳುವುದಿಲ್ಲ" ಎಂದರು.
"ತಮ್ಮ ಪಕ್ಷದ ಹಿರಿಯ ಶಾಸಕರನ್ನು ಹಿಡಿದಿಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ನಮ್ಮ ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಇವತ್ತು 4 ಜನ ಸಚಿವರು ಪತ್ರ ಬರೆದಿದ್ದಾರೆ. ಎಲ್ಲವೂ ಸರಿ ಇದ್ದರೆ ಯಾಕೆ ಪತ್ರ ಬರೆಯುತ್ತಾರೆ ಎಂದು ಪ್ರಶ್ನಿಸಿದರು. ಎಲ್ಲವೂ ಸರಿ ಇಲ್ಲದಾಗ ರಾಜಕೀಯದಲ್ಲಿ ಪ್ರೇಮಪತ್ರಗಳು ಶುರುವಾಗುತ್ತವೆ. ಈಗ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇಲ್ಲವೆಂದು ಆ ಪಕ್ಷದ ಶಾಸಕರು ಮತ್ತು ಸಚಿವರು ಹೇಳುವಾಗ ಯಾರೂ ಅಲ್ಲಿಗೆ ಹೋಗುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.