ಬೆಂಗಳೂರು:ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಶುಕ್ರವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ತೊರೆಯಲಿದ್ದಾರೆ ಎಂಬ ಅನುಮಾನಕ್ಕೆ ಈ ಭೇಟಿ ಮತ್ತಷ್ಟು ಬಲ ನೀಡಿದಂತಾಗಿದೆ. ಶುಕ್ರವಾರ ರಾತ್ರಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಉಭಯ ಬಿಜೆಪಿ ಶಾಸಕರು ಚರ್ಚೆ ನಡೆಸಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಲಕ್ಷಣಗಳು ಈಗಾಗಲೇ ಗೋಚರವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಭೇಟಿಯಾದ ಎಸ್ಟಿ ಸೋಮಶೇಖರ್: ಬಿಜೆಪಿಯಲ್ಲಿ ಮತ್ತೆ ಸಂಚಲನ..!
ಈಗಾಗಲೇ ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇತ್ತ ಬಿಜೆಪಿ ವರಿಷ್ಠರು ಪಕ್ಷ ತೊರೆಯದಂತೆ ಮನವೊಲಿಕೆ ಯತ್ನ ನಡೆಸುತ್ತಿದ್ದರೂ, ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಸಮಾಧಾನಗೊಂಡಿಲ್ಲ ಎನ್ನಲಾಗಿದೆ. ಸಿಎಂ ಭೇಟಿ ವೇಳೆ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರಾ? ಎಂಬ ಬಗ್ಗೆ ಪ್ರಶ್ನೆಗಳು ಮೂಡಿದೆ. ಆದರೆ, ಈ ಬಗ್ಗೆ ಉಭಯ ನಾಯಕರೂ ಯಾವುದೇ ಮಾಹಿತಿ ನೀಡಿಲ್ಲ.
ಮೇಲ್ನೋಟಕ್ಕೆ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಹಿರಂಗವಾಗಿ ಹೇಳಿಲ್ಲವಾದರೂ, ಅವರ ನಡೆಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ನಾಯಕರುಗಳನ್ನು ಭೇಟಿಯಾಗುವ ಮೂಲಕ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ST Somashekhar: ನಾನು ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲಿದ್ದೇನೆ - ಎಸ್.ಟಿ.ಸೋಮಶೇಖರ್
ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಮನವಿ:ಇನ್ನು ಶಿವರಾಂ ಹೆಬ್ಬಾರ್ ಸಿಎಂ ಭೇಟಿ ವೇಳೆ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದುಇ ಘೋಷಣೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ನನ್ನ ಮತ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರ, ಮುಂಡಗೋಡ ಮತ್ತು ಶಿರಸಿ ತಾಲೂಕಿನ ಪೂರ್ವ ಭಾಗವಾದ ಬನವಾಸಿ ಹೋಬಳಿಯಲ್ಲಿ ಈ ವರ್ಷ ವಾಡಿಕೆ ಮಳೆಯ ಪ್ರಮಾಣ ಶೇ.70 ಕ್ಕಿಂತ ಕಡಿಮೆಯಾಗಿದೆ. ಆರಂಭಿಕ ಮಳೆಯನ್ನು ನಂಬಿ ಈ ಭಾಗದ ರೈತರು ತಮ್ಮ ಬಿತ್ತನೆ ಕಾರ್ಯ ಮಾಡಿದ್ದರು. ಬಿತ್ತನೆ ಮಾಡಿದ ಬೆಳೆ ಮಳೆಯ ಕೊರತೆಯಿಂದ ಈಗಾಗಲೇ ಹಾಳಾಗಿರುವ ಬಗ್ಗೆ ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಭಾಗದ ರೈತರು ತೊಂದರೆಗೊಳಗಾಗಿದ್ದು, ರೈತರ ಹಿತದೃಷ್ಠಿಯಿಂದ ಯಲ್ಲಾಪುರ, ಮುಂಡಗೋಡ ಮತ್ತು ಶಿರಸಿ ತಾಲೂಕಿನ ಪೂರ್ವ ಭಾಗವಾದ ಬನವಾಸಿ ಹೋಬಳಿಯನ್ನು “ಬರಗಾಲ ಪೀಡಿತ" ಪ್ರದೇಶವೆಂದು ಘೋಷಿಸುವಂತೆ ಕೋರಿದ್ದಾರೆ. ಅಲ್ಲದೆ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಯಲ್ಲಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಕೆಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಸ್ಪಷ್ಟನೆ ನೀಡಿದ್ದ ಎಸ್.ಟಿ.ಸೋಮಶೇಖರ್:"ನಾನು ಪಕ್ಷ ಬಿಡುವುದೂ ಇಲ್ಲ, ಲೋಕಸಭೆ ಚುನಾವಣೆಗೂ ಸ್ಪರ್ಧಿಸುವುದಿಲ್ಲ" ಎಂದು ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದರು. ಆ.24ರಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಶೇ.100ರಷ್ಟು ಕಾಂಗ್ರೆಸ್ಗೆ ಹೋಗಲ್ಲ. ನನ್ನ ಮಗನೂ ರಾಜಕೀಯಕ್ಕೆ ಬರಲ್ಲ. ಒಂದು ವೇಳೆ ಹಾಗೆ ಮಾಡಿದರೆ ಆ ದಿನವೇ ಬಂದು ನನ್ನನ್ನು ಕೇಳಿ" ಎಂದು ಹೇಳಿದ್ದರು.
ಇದನ್ನೂ ಓದಿ:ಬಿಜೆಪಿ ಬಿಡುವುದಿಲ್ಲ ಎಂದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್