ಕರ್ನಾಟಕ

karnataka

ಕ್ಲಾಸ್​ ಕೇಳೋಕೆ ಮನೆಯಲ್ಲಿ ಟಿವಿಯಿಲ್ಲ: ಶಿಕ್ಷಣ ಸಚಿವರೊಂದಿಗೆ ಎಸ್​​ಎಸ್​ಎಲ್​ಸಿ ವಿದ್ಯಾರ್ಥಿಗಳ ಸಂವಾದ

By

Published : May 19, 2020, 11:18 PM IST

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದರು. ಪರೀಕ್ಷೆ ಎಂದರೆ ಭೂತವಲ್ಲ, ಅದೊಂದು ಕ್ರೀಡೆ ಇದ್ದಂತೆ ಎಂದು ತಿಳಿದು, ಸಂತೋಷದಿಂದ ಪರೀಕ್ಷಾ ಕೊಠಡಿಗೆ ತೆರಳುವಂತೆ ವಿದ್ಯಾರ್ಥಿಗಳಿಗೆ ಸಚಿವರು ಸೂಚಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

ಬೆಂಗಳೂರು: ಎಸ್​​ಎಸ್​ಎಲ್​ಸಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರು ಸಂವಾದ ನಡೆಸಿದರು. ಲಾಕ್‍ಡೌನ್ ಸಡಿಲಿಕೆ ನಂತರ ಎಸ್​​ಎಸ್​ಎಲ್​ಸಿ ಪರೀಕ್ಷೆಗೆ ದಿನಾಂಕ ನಿಗದಿಯಾದ್ದರಿಂದ, ವಿದ್ಯಾರ್ಥಿಗಳ ಮನಸ್ಥಿತಿ ಅರಿಯಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದ್ರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

ಈ ವೇಳೆ, ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿನಿ ಎನ್.ಎಸ್. ಶ್ರದ್ಧಾ ಒಡೆಯರಪುರ ತಮ್ಮ ಮನೆಯಲ್ಲಿ ಟಿ.ವಿ. ಇಲ್ಲವಾದ್ದರಿಂದ ಚಂದನ ವಾಹಿನಿ ನೋಡಲು ಆಗುತ್ತಿಲ್ಲ ಎಂದು ಸಚಿವರಿಗೆ ತಿಳಿಸಿದರು. ತಕ್ಷಣವೇ ಶಿವಮೊಗ್ಗದ ಬಿಇಒಗೆ ಫೋನ್ ಮಾಡಿದ ಸಚಿವರು, ವಿದ್ಯಾರ್ಥಿನಿಯ ಫೋನ್ ನಂಬರ್ ನೀಡಿದ್ದಲ್ಲದೇ, ಆ ವಿದ್ಯಾರ್ಥಿನಿಗೆ ಚಂದನ ವಾಹಿನಿಯ ಪುನರ್ಮನನ ತರಗತಿ ವೀಕ್ಷಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡಲು ಸೂಚಿಸಿದರು.

ಶಿವಮೊಗ್ಗ, ಹೊಸಕೋಟೆ, ಬೆಂಗಳೂರು, ಬಾಗಲಕೋಟೆ, ಇಳ್ಕಲ್, ಹಾನಗಲ್, ಸವಣೂರು, ಗದಗ, ಹುಬ್ಬಳ್ಳಿ ಮತ್ತಿತರ ಭಾಗದ 40ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಸಚಿವರು ಸಂವಾದ ನಡೆಸಿದರು. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಈ ಬಾರಿ ಸ್ವಲ್ಪ ತಡವಾಗಿ ಆರಂಭವಾಗುತ್ತಿರುವುದಕ್ಕೆ ಬೇಜಾರು ಮಾಡಿಕೊಳ್ಳದೇ ಚೆನ್ನಾಗಿ ಓದಬೇಕು ಎಂದು ಸಲಹೆ ನೀಡಿದರು.

ಸಚಿವರೊಂದಿಗೆ ಮಾತನಾಡಿದ ಎಲ್ಲ ವಿದ್ಯಾರ್ಥಿಗಳು ಕೊನೆಗೂ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದರಿಂದ ಖುಷಿಯಾಗಿದ್ದು, ನಿನ್ನೆಯಿಂದಲೇ ಪರೀಕ್ಷೆಗೆ ಗಂಭೀರವಾಗಿ ಓದುತ್ತಿರುವುದಾಗಿ ಹೇಳಿಕೊಂಡರು.

ಪರೀಕ್ಷೆಯೆಂದರೆ ಭೂತವಲ್ಲ, ಅದೊಂದು ಕ್ರೀಡೆ ಇದ್ದಂತೆ ಎಂದು ತಿಳಿದು ಸಂತೋಷದಿಂದ ಪರೀಕ್ಷಾ ಕೊಠಡಿಗೆ ತೆರಳುವಂತೆ ಸಚಿವರು ಸೂಚಿಸಿದರು. ಹಾಗೆಯೇ ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ವಿವರಿಸಿದರಲ್ಲದೇ ತಾವು ಕಷ್ಟಪಟ್ಟು ಓದಿ ಪರೀಕ್ಷೆಯನ್ನು ಖುಷಿಯಿಂದ ಬರೆಯುವುದಷ್ಟೇ ನಿಮ್ಮ ಕೆಲಸ ಎಂದು ಸಲಹೆ ನೀಡಿದರು.

ABOUT THE AUTHOR

...view details