ಬೆಂಗಳೂರು:ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇಕಡಾ 83.89ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದು ಶೇಕಡಾ 87.87ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ಹಾಗೆಯೇ ಶೇಕಡಾ 80.08 ಬಾಲಕರು ತೇರ್ಗಡೆ ಹೊಂದಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆ (ಶೇ. 96.80) ಮೊದಲ ಸ್ಥಾನ ಪಡೆದರೆ, ಮಂಡ್ಯ (ಶೇ. 96.74) 2ನೇ ಸ್ಥಾನ ಸಿಕ್ಕಿದ್ದು, ಹಾಸನ (ಶೇ. 96.68) ಮೂರನೇ ಸ್ಥಾನ ಹಾಗೂ ಯಾದಗಿರಿ ಜಿಲ್ಲೆ (ಶೇ. 75.49) ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.1.24 ರಷ್ಟು ಕಡಿಮೆ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು www.karresults.nic.in ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿಂದು ಮಂಡಳಿಯ ಅಧ್ಯಕ್ಷ ರಾಮನಾಥನ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಅವರು ಮಾಧ್ಯಮಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಬೆಂಗಳೂರಿನ ನ್ಯೂ ಮೆಕಾಲ ಇಂಗ್ಲೀಷ್ ಸ್ಕೂಲ್ನ ವಿದ್ಯಾರ್ಥಿನಿ ಭೂಮಿಕಾ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಹೈಸ್ಕೂಲ್ನ ವಿದ್ಯಾರ್ಥಿ ಯಶಸ್ ಗೌಡ, ಬೆಳಗಾವಿ ಜಿಲ್ಲೆಯ ಸವದತ್ತಿಯ ಕುಮಾರೇಶ್ವರ ಶಾಲೆಯ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಆಕ್ಸ್ಫರ್ಡ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿ ಭೀಮನಗೌಡ ಹನುಮಂತಗೌಡ ಪಾಟೀಲ್ ಅವರು 100ಕ್ಕೆ 100 ಅಂಕ ಪಡೆದಿದ್ದಾರೆ.
ಹಾಜರಾದ 8,35,102 ವಿದ್ಯಾರ್ಥಿಗಳಲ್ಲಿ 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 83.89ರಷ್ಟು ಫಲಿತಾಂಶ ಬಂದಿದೆ. 4,25,968 ಬಾಲಕರು ಪರೀಕ್ಷೆ ಬರೆದಿದ್ದು, ಇದರಲ್ಲಿ 3,41,108 ಸೇರಿದಂತೆ ಶೇ. 80.08ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. 4,09,134 ಬಾಲಕಿಯರು ಪರೀಕ್ಷೆ ಬರೆದಿದ್ದು, 3,59,511 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ಶೇ. 87.87ರಷ್ಟು ಫಲಿತಾಂಶ ಪಡೆಯುವ ಮೂಲಕ ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕನ್ನಡದಲ್ಲಿ 14,983, ಇಂಗ್ಲಿಷ್ನಲ್ಲಿ 9,754, ಹಿಂದಿಯಲ್ಲಿ 16,170, ಗಣಿತ 2,132, ವಿಜ್ಞಾನ 983 ಹಾಗೂ ಸಮಾಜ ವಿಜ್ಞಾನದಲ್ಲಿ 8,311 ವಿದ್ಯಾರ್ಥಿಗಳು ಶೇ.100ರಷ್ಟು ಅಂಕ ಗಳಿಸಿದ್ದಾರೆ.