ಬೆಂಗಳೂರು:ಕೊರೊನಾ ಸೋಂಕಿನ ಸಮಸ್ಯೆ ಪರಿಹಾರದ ನಂತರವೇ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿಯ ಬಾಕಿ ಇರುವ ಒಂದು ಪತ್ರಿಕೆಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಸಭೆ ನಂತರ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿನ ನಿರ್ಧಾರಗಳನ್ನು ಪ್ರಕಟಿಸಿದರು.
ಪ್ರಮುಖವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ಪಿಯುಸಿ ಮೌಲ್ಯಮಾಪನದ ಬಗ್ಗೆ ಸುಳ್ಳು ವದಂತಿಗೆ ಒಳಗಾಗಬೇಡಿ, ಆತಂಕಕ್ಕೆ ಒಳಗಾಗಬೇಡಿ ಈ ಬಗ್ಗೆ ವಾಟ್ಸ್ ಆ್ಯಪ್ನಲ್ಲಿ ವದಂತಿ ಹರಡುವ ವರ್ಗ ಇದೆ. ಅವರಿಗೆ ಏನು ಸಿಗುತ್ತೋ ಗೊತ್ತಿಲ್ಲ, ವದಂತಿ ಹರಡುವ ಫ್ಯಾಕ್ಟರಿಯನ್ನೇ ಇವರೆಲ್ಲ ಇಟ್ಟಿರಬೇಕು. ಕೊರೊನಾ ಪರಿಹಾರವಾದ ನಂತರವೇ ಅಧಿಕಾರಿಗಳ ಜೊತೆ ಚರ್ಚಿಸಿ ನಾನೇ ಖುದ್ದಾಗಿ ಸುದ್ದಿಗೋಷ್ಠಿ ನಡೆಸಿ ವೇಳಾಪಟ್ಟಿ ಪ್ರಕಟಿಸಲಿದ್ದೇನೆ. ಸದ್ಯ ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಕ್ಕಳ, ಪೋಷಕರ ಆತಂಕ ನಮಗೂ ಗೊತ್ತಾಗುತ್ತದೆ, ಕೊರೊನಾ ಆತಂಕ ಕಡಿಮೆಯಾಗುವವರೆಗೂ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಪಿಎಂ ಜೊತೆ ಸಿಎಂ ವಿಡಿಯೋ ಸಂವಾದ ಇದ್ದು, ಲಾಕ್ಡೌನ್ ಬಗ್ಗೆ ಚರ್ಚೆ ನಡೆಯಲಿದೆ. ಅದರ ನಂತರ ಹೊರಬೀಳುವ ತೀರ್ಮಾನದಂತೆ, ಈ ಎಲ್ಲಾ ನಿರ್ಧಾರದ ಬಗ್ಗೆ ಕ್ರಮ, ದಿನಾಂಕ ಪ್ರಕಟಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸೋಮವಾರ ಮಧ್ಯಾಹ್ನ ರಾಜ್ಯದ ಎಲ್ಲಾ ಡಿಡಿಪಿಐ, ಡಯಟ್ ಪ್ರಾಂಶುಪಾಲರ ಜೊತೆ ವಿಡಿಯೋ ಸಂವಾದ ನಡೆಸಲಿದ್ದೇನೆ. ಎಸ್ಎಸ್ಎಲ್ಸಿ ಮಕ್ಕಳಿಗೆ ಶಿಕ್ಷಕರು ಮೆಂಟರ್ ಆಗಿ ಕೆಲಸ ಮಾಡಲಿದ್ದಾರೆ. ವಿದ್ಯಾರ್ಥಿಗಳ ತಂಡ ರಚಿಸಿ ಮೆಂಟರ್ ನೇಮಿಸಲಾಗಿದೆ, ಅವರು ವಿದ್ಯಾರ್ಥಿಗಳ ಸಂಪರ್ಕದಲ್ಲಿ ಇದ್ದಾರೆ. ಮಕ್ಕಳ ಗೊಂದಲಕ್ಕೆ ಈ ಶಿಕ್ಷಕರು ಪರಿಹಾರ ಸೂಚಿಸಬೇಕು, ಧೈರ್ಯ ತುಂಬಬೇಕು ಎಂದು ಹೇಳಿದರು.
ರೇಡಿಯೋ, ದೂರದರ್ಶನಲ್ಲಿ ಕ್ಲಾಸ್:ಆಕಾಶವಾಣಿ, ದೂರದರ್ಶನ ಎರಡೂ ಮಾಧ್ಯಮಗಳ ಮೂಲಕ ಎಸ್ಎಸ್ಎಲ್ಸಿ ಮಕ್ಕಳಿಗೆ ಮತ್ತೊಮ್ಮೆ ಎಲ್ಲಾ ವಿಷಯಗಳ ಬಗ್ಗೆ ಪುನರ್ ಮನನ ತರಗತಿಗಳನ್ನು ಮಾಡಲು ತೀರ್ಮಾನ ಮಾಡಲಾಗಿದೆ. ಇಷ್ಟರಲ್ಲೇ ಆಕಾಶವಾಣಿ, ದೂರದರ್ಶನ ಪ್ರಮುಖರ ಜೊತೆ ಚರ್ಚಿಸುವ ಕಾರ್ಯ ಮಾಡಲಿದ್ದೇವೆ. ಇದರಿಂದ ಕುಗ್ರಾಮದಲ್ಲಿ ಇರುವವರಿಗೂ ಸಹಾಯವಾಗಬಹುದು ಎಂದರು.
ಮಕ್ಕಳಿಗೆ ಯೂಟ್ಯೂಬ್ ಮಾಹಿತಿ ಮನರಂಜನೆ:ಒಂಬತ್ತನೆ ತರಗತಿವರೆಗೆ ಬಂದ ಮಕ್ಕಳ ಗಮನಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಯೂಟ್ಯೂಬ್ ಚಾನಲ್ ಹೊರತರಲು ಚಿಂತನೆ ನಡೆಸಿದ್ದೇವೆ. ಆಸಕ್ತರಿಂದ ಕೊಡುಗೆ ಆಹ್ವಾನ ಮಾಡಿದ್ದೇವೆ, ಕ್ವಿಜ್ ಮಾದರಿಯಾಗಿ ಮಕ್ಕಳಿಗೆ ಆಸಕ್ತಿ ಉಂಟು ಮಾಡುವುದರ, ಕಥೆ ಹೇಳುವ, ಮ್ಯಾಜಿಕ್ ಮೂಲಕ ಮಕ್ಕಳನ್ನು ಸೆಳೆಯುವ ಹೊಸ ಹೊಸ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ ಏಪ್ರಿಲ್ 14ರ ನಂತರ ಈ ಯೂಟ್ಯೂಬ್ ಪ್ರಾರಂಭವಾಗುವ ಎಲ್ಲಾ ಸಾಧ್ಯತೆ ಇದೆ ಎಂದರು.