ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರದ ಸುತ್ತ ಗುಂಪು ಸೇರುವುದು, ಅನುಮಾನಾಸ್ಪದ ರೀತಿಯಲ್ಲಿ ಓಡಾಟ, ಗಲಾಟೆಗೆ ಯಾವುದೇ ಅವಕಾಶವಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸೆಕ್ಷನ್ 144 ಅಡಿ ನಗರ ಆಯುಕ್ತರ ಸೂಚನೆ ಮೇರೆಗೆ ಸಂಬಂಧಿಸಿದ ಪೊಲೀಸ್ ಆಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ
ಬೆಂಗಳೂರು:ಕೊರೊನಾ ಸೋಂಕಿನ ನಡುವೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಪ್ರೌಢ ಪರೀಕ್ಷಾ ಮಂಡಳಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗಳನ್ನು ಸುಗಮ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ನಡೆಸಲು ಪರೀಕ್ಷಾ ಕೇಂದ್ರ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮುಂಜಾನೆ 9 ಗಂಟೆಯಿಂದ ಮಧ್ಯಾಹ್ನ 1-30 ರವರೆಗೆ ಜೆರಾಕ್ಸ್ ಅಂಗಡಿ ಮುಚ್ಚುವಂತೆ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ಗುಂಪು ಸೇರುವುದು, ಓಡಾಟ, ಗಲಾಟೆಗೆ ಅವಕಾಶವಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಸೆಕ್ಷನ್ 144 ಅಡಿ ನಗರ ಆಯುಕ್ತ ಸೂಚನೆ ಮೇರೆಗೆ ಸಂಬಂಧಿಸಿದ ಪೊಲೀಸ್ ಆಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
ಪೊಲೀಸರ ವಿಶೇಷ ತಂಡ ಅಲರ್ಟ್:
ನಿನ್ನೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಹಬ್ಬಿತ್ತು. ಹೀಗಾಗಿ ಸಿಸಿಬಿ ಪೊಲೀಸರು ವಿಶೇಷವಾಗಿ ಇದರ ಬಗ್ಗೆ ಗಮನವಿಟ್ಟು ಪ್ರತಿಯೊಬ್ಬರ ಚಲನವಲನ, ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನ ವಹಿಸಲಿದ್ದಾರೆ.