ಕರ್ನಾಟಕ

karnataka

ETV Bharat / state

ಇತಿಹಾಸ ಸೃಷ್ಟಿಸಿ ದೇಶಕ್ಕೆ ಮಾದರಿಯಾದ ರಾಜ್ಯದ ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಸಚಿವ ಸುರೇಶ್ ಕುಮಾರ್

ಕೋವಿಡ್​ನಂತಹ ಸಂಕಷ್ಟದ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸುವುದು ಬಹುದೊಡ್ಡ ಸವಾಲಾಗಿತ್ತು. ಅದು ನಮ್ಮ ಪ್ರತಿಷ್ಠೆಯ ಪ್ರಶ್ನೆಯಾಗದೇ ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆಯೇ ಮುಖ್ಯವಾಗಿತ್ತು. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಸರ್ಕಾರದ ಪ್ರಯತ್ನವಾಗಿ ಬಹು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಸುರೇಶ್ ಕುಮಾರ್
ಸುರೇಶ್ ಕುಮಾರ್

By

Published : Jul 3, 2020, 10:48 PM IST

ಬೆಂಗಳೂರು:ಜೂನ್ 25 ರಿಂದ ಜುಲೈ 3ರವರೆಗೆ ನಡೆದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ, ವಿದ್ಯಾರ್ಥಿಗಳು, ಪೋಷಕರು, ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆರು ದಿನಗಳ ಅವಧಿಯ ಪರೀಕ್ಷೆಗಳಲ್ಲಿ ಪ್ರತಿದಿನ ಸರಾಸರಿ 7.5 ಲಕ್ಷ ವಿದ್ಯಾಥಿಗಳು ಯಾವುದೇ ಸಮಸ್ಯೆಯಿಲ್ಲದ ರೀತಿಯಲ್ಲಿ ಪರೀಕ್ಷೆಗಳನ್ನು ಧೈರ್ಯವಾಗಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಎದುರಿಸಿದ್ದಾರೆ ಎಂದರು.

ಕೋವಿಡ್​ನಂತಹ ಸಂಕಷ್ಟದ ಸಂದರ್ಭದಲ್ಲಿ ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಗಳನ್ನು ನಡೆಸುವುದು ಬಹುದೊಡ್ಡ ಸವಾಲಾಗಿತ್ತು. ಅದು ನಮ್ಮ ಪ್ರತಿಷ್ಠೆಯ ಪ್ರಶ್ನೆಯಾಗದೇ ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆ ಮುಖ್ಯವಾಗಿತ್ತು. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಸರ್ಕಾರದ ಪ್ರಯತ್ನವಾಗಿ ಬಹು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇದು ನನಗೆ ನಿಜಕ್ಕೂ ಹೆಮ್ಮೆ ವಿಷಯ. ರಾಜ್ಯ ಸರ್ಕಾರ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ದೇಶದಲ್ಲಿ ಒಂದು ಇತಿಹಾಸವನ್ನು ಸೃಷ್ಟಿಸಿದೆ ಎಂದರು.

ಪ್ರತಿ ಪರೀಕ್ಷೆಗೆ ಸರಾಸರಿ ಶೇ. 98 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥೆಯ ಮೇಲಿನ ಭರವಸೆಯನ್ನು ತೋರಿದ್ದಾರೆ. ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೆರಿ, ಮಹಾರಾಷ್ಟ್ರಗಳು ಸೇರಿದಂತೆ ಬಹುಪಾಲು ರಾಜ್ಯ ಸರ್ಕಾರಗಳು ತಮ್ಮ ಮಂಡಳಿಗಳ ಪರೀಕ್ಷೆಗಳನ್ನು ಮಾಡದೇ ಹಿಂದೆ ಸರಿದವು. ನಾಡಿನ ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟುಕೊಂಡು ಅವರ ಇಚ್ಛೆಯಂತೆ ನಾವು ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ಯಾವುದೇ ಒಂದು ಸಣ್ಣ ಲೋಪವಾಗದಂತೆ ಅಳವಡಿಸಿಕೊಂಡು ನಾವು ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಕೋವಿಡ್ ಸೋಂಕಿತ 33 ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಪರೀಕ್ಷೆಯನ್ನು ನಿರಾಕರಿಸಿ ಅವರಿಗೆ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಅವಕಾಶಗಳನ್ನು ಕಲ್ಪಿಸಲಿದ್ದೇವೆ ಎಂದು ಹೇಳಿದರು.

ವಿಶೇಷವೆಂದರೆ ಸುಮಾರು 7.5 ಲಕ್ಷ ವಿದ್ಯಾರ್ಥಿಗಳು ಪ್ರತಿದಿನ ಪರೀಕ್ಷೆಗಳನ್ನು ಬರೆದಿದ್ದಾರೆ. ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ, ಸಲಹೆ ಸೂಚನೆ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಗಳು, ರಾಜ್ಯದ ವಿಧಾನಸಭೆ, ವಿಧಾನಪರಿಷತ್‍ನ ಎಲ್ಲ ಸದಸ್ಯರು, ವಿರೋಧ ಪಕ್ಷದ ನಾಯಕರು, ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಿಲ್ಲೆಗಳ ಡಿಸಿ, ಎಸ್ಪಿ, ಸಿಇಒ, ಡಿಎಚ್‍ಒ, ಖಜಾನಾಧಿಕಾರಿಗಳು ಹಾಗೆಯೇ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಚಿವ ಸುರೇಶ್ ಕುಮಾರ್ ಕೃತಜ್ಞತೆಗಳನ್ನು ಸಲ್ಲಿಸಿದರು.

ಎಸ್‍ಒಪಿ ಕಟ್ಟುನಿಟ್ಟಿನ ಪಾಲನೆ :

ಎಸ್​ಒಪಿ ಪ್ರಕಾರ ಕೋವಿಡ್ ಸೋಂಕು ಇರುವ ಮನೆಗಳ ಮಕ್ಕಳಿಗೆ ಪರೀಕ್ಷೆಗೆ ಅವಕಾಶವಿರಲಿಲ್ಲ. ಅದರಂತೆ ಕೊನೆಯ ದಿನವಾದ ಇಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರ ಮನೆಯಲ್ಲಿ ಒಬ್ಬರಿಗೆ ಸೋಂಕು ತಗಲಿದ್ದರಿಂದ ಇಂದು ಅವರ ಮನೆಯ ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಿಸಲಾಯಿತು. ಈ ವಿಚಾರದಲ್ಲಿ ಕಳೆದ ಆರು ದಿನಗಳಲ್ಲಿಯೂ ಯಾವುದೇ ರೀತಿಯ ವ್ಯತ್ಯಯವಾಗದಂತೆ ನ್ಯಾಯಾಲಯಕ್ಕೆ ನೀಡಿದ ವಾಗ್ದಾನದಂತೆ ಕಟ್ಟುನಿಟ್ಟಾಗಿ ನಡೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಪರೀಕ್ಷೆ ಆರಂಭವಾದ ಮೇಲೆ ತಾವು ಹಲವಾರು ಜಿಲ್ಲೆಗಳ 80ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಸಹ ನ್ಯಾಯಾಲಯಕ್ಕೆ ನೀಡಿದ ಎಸ್ಒಪಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆ ಮಾಡಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೂ ಸಹ ಸಾಮಾಜಿಕ ಅಂತರವನ್ನು ಕಾಪಾಡಿ ಅತ್ಯಂತ ಸುರಕ್ಷಿತ ವಾತಾವರಣವನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಅತ್ಯಂತ ಸೂಕ್ಷ್ಮವಾದ ಸಾಮಾಜಿಕ ಸಂದರ್ಭದಲ್ಲಿ ಯಾವುದೇ ಸಣ್ಣ ಸಮಸ್ಯೆಗೂ ಅವಕಾಶ ನೀಡದೇ 8.5 ಲಕ್ಷ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಹಾಗೂ 6.5 ಪಿಯುಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ಏಳನೇ ದಿನವಾದ ಇಂದು ತೃತೀಯ ಭಾಷಾ ಪರೀಕ್ಷೆಗೆ ನೊಂದಾಯಿತ 7,76,251 ವಿದ್ಯಾರ್ಥಿಗಳ ಪೈಕಿ 7,61,506 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.10ರಷ್ಟು ಇಂದು ಹಾಜರಾತಿ ಇದೆ. 14,745 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. (ಕಳೆದ 2018-19ನೇ ಸಾಲಿಗೆ 7,72,071 ವಿದ್ಯಾರ್ಥಿಗಳ ಪೈಕಿ 7,62,538 ವಿದ್ಯಾರ್ಥಿಗಳು ಹಾಜರಾಗಿದ್ದು, 9,533 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.76 ಹಾಜರಾತಿ ಇತ್ತು.)

ಮೊದಲ ಬಾರಿಗೆ 7,43,477 ಶಾಲಾ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 3,911 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಯಾವುದೇ ವಿದ್ಯಾರ್ಥಿಗಳು ಇರುವುದಿಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1,446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 41 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 590 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,535 ವಿದ್ಯಾರ್ಥಿಗಳು ಹಾಜರಾಗಿದ್ದರೆ, 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ವಿವರಿಸಿದರು.

ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟಿವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಡಾಕ್ಯೂಮೆಂಟರಿ ಪ್ರದರ್ಶನ :ಇದಕ್ಕೂ ಮುನ್ನ ಪರೀಕ್ಷೆ ಕುರಿತಂತೆ ತಯಾರಿಸಲಾದ ವಿವಿಧ ಘಟನಾವಳಿಗಳ ಡಾಕ್ಯೂಮೆಂಟರಿಯನ್ನು ಪ್ರಸ್ತುತ ಪಡಿಸಲಾಯಿತು.

ABOUT THE AUTHOR

...view details