ಬೆಂಗಳೂರು :ರಾಜ್ಯಾದ್ಯಂತ ನಾಳೆಯಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯಲಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಮಕ್ಕಳು ಭಯದಿಂದಲೇ ಪರೀಕ್ಷೆಯನ್ನ ಬರೆದಿದ್ದರು. ಇದೀಗ ಕೋವಿಡ್ ಮೂರನೇ ಅಲೆಯು ಇಳಿಕೆಯಾಗಿದ್ದು, ಆತಂಕ ಕಡಿಮೆ ಆಗಿದೆ. ಆದರೆ, ಅಂದು ಕೋವಿಡ್ ಸಂಕಷ್ಟ ಎದುರಿಸಿದ್ದ ಶಿಕ್ಷಣ ಇಲಾಖೆ ಇಂದು ಹಿಜಾಬ್ ಸಂಘರ್ಷದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕಿದೆ.
ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಸಮವಸ್ತ್ರವನ್ನ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಶ್ರೀನಿವಾಸಮೂರ್ತಿ ಸುತ್ತೋಲೆ ಹೊರಡಿಸಿದ್ದಾರೆ. ನಿಯಮ 1995ರ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿ ಮಾಡಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಇನ್ನು ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯವಾಗಿ ಇರಲಿದೆ. ಧಾರ್ಮಿಕ ವಸ್ತ್ರಗಳನ್ನ ಹಾಕಿಕೊಂಡು ಬಂದರೆ ಕೇಂದ್ರದ ಒಳಗೆ ಪ್ರವೇಶ ಇರೋದಿಲ್ಲ.
ಸರ್ಕಾರದ ಈ ಆದೇಶಕ್ಕೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ನಾಳೆಯಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಶುರುವಾಗಲಿದೆ. ಸಮವಸ್ತ್ರಕ್ಕೆ ಸಂಬಂಧಿಸಿದ್ದಂತೆ ನ್ಯಾಯಾಲಯ ಕೊಟ್ಟ ತೀರ್ಪನ್ನ ಎಲ್ಲರೂ ಪಾಲಿಸಬೇಕು. ಧಾರ್ಮಿಕ ಉಡುಪು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರುವುದು ಸರಿಯಲ್ಲ. ಆದರೆ, ಎಸ್ಎಸ್ಎಲ್ಸಿ ಮಕ್ಕಳಿಗೆ ಕೋವಿಡ್ ಕಾರಣದಿಂದ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಅಂತಹ ಮಕ್ಕಳಿಗೆ ಶಾಲಾ ಸಮವಸ್ತ್ರಕ್ಕೆ ರಿಲ್ಯಾಕ್ಸ್ ಕೊಟ್ಟು ಸಾಮಾನ್ಯ ವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಲಿದೆ. ಮಾರ್ಚ್ 28ರಿಂದ ಶುರುವಾಗಿ ಏಪ್ರಿಲ್ 11ಕ್ಕೆ ಮುಗಿಯಲಿದೆ. ನಾಳೆ ಪ್ರಥಮ ಭಾಷೆ ವಿಷ್ಯಕ್ಕೆ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-45ರವರೆಗೆ ಪರೀಕ್ಷೆ ಇರಲಿದೆ. ಭಾಷಾ ಪರೀಕ್ಷೆಯು 100 ಅಂಕಗಳಿಗೆ ಹಾಗೂ ಕೋರ್ ಸಬ್ಜೆಕ್ಟ್ 80 ಅಂಕಗಳಿಗೆ ಇರಲಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು 15 ನಿಮಿಷ ಕಾಲಾವಧಿ ಇರಲಿದೆ.
ಪರೀಕ್ಷೆಯಲ್ಲಿ ಅಬ್ಸೆಂಟ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿರುವ ಪರೀಕ್ಷಾ ಮಂಡಳಿ, ಎಕ್ಸಾಂನಲ್ಲಿ ಫೇಲಾಗಿ ಹಾಗೂ ಪರೀಕ್ಷೆಯಲ್ಲಿ ಅಬ್ಸೆಂಟ್ ಆದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಎಸ್ಎಸ್ಎಲ್ಸಿ ಬೋರ್ಡ್ನ ನಿರ್ದೇಶಕ ಗೋಪಾಲಕೃಷ್ಣ, ಹೆಚ್. ಎನ್ ಮಾತಾನಾಡಿದ್ದು, ಪರೀಕ್ಷೆಯಲ್ಲಿ ಫೇಲ್ ಆದರೂ ಮತ್ತು ಪರೀಕ್ಷೆಯಲ್ಲಿ ಅಬ್ಸೆಂಟ್ ಇದ್ದವರು ಪ್ರತಿವರ್ಷದಂತೆ ಸಪ್ಲಿಮೆಂಟರಿನಲ್ಲಿ ಎಕ್ಸಾಮ್ ಬರೆಯಬಹುದು. ಸರ್ಕಾರದ ನಿಯಮದಂತೆ ಮಕ್ಕಳೇ ಪರೀಕ್ಷೆ ಬರೆಯಬೇಕಾಗುತ್ತೆ ಎಂದರು.
ಇದನ್ನೂ ಓದಿ:ಹಿಜಾಬ್ ಹೇಳಿಕೆ ವಿವಾದ: ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಸಿದ್ದರಾಮಯ್ಯ
ನಾಳೆಯ ಪರೀಕ್ಷೆಯ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ನಾಗೇಶ್, ಈ ಸಲ ಪರೀಕ್ಷೆ ಬರೆಯಲು ಒಟ್ಟು 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಗಂಡು ಮಕ್ಕಳು 4,52,732 ಹಾಗೂ 4,21,110 ಹೆಣ್ಣು ಮಕ್ಕಳು, 4 ತೃತೀಯ ಲಿಂಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನ ಎದುರಿಸಲಿದ್ದಾರೆ. ಸುಮಾರು 5,307 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ರಾಜ್ಯದ 5,717 ಅನುದಾನಿ, 3,412 ಅನುದಾನಿತ ಹಾಗೂ 6,258 ಅನುದಾನ ರಹಿತ ಶಾಲೆಗಳು ಪರೀಕ್ಷೆಗೆ ನೋಂದಾಯಿಸಿವೆ. ಇದರಲ್ಲಿ ಸರ್ಕಾರಿ ಶಾಲೆಯ 3,76,685 ವಿದ್ಯಾರ್ಥಿಗಳು, ಅನುದಾನಿತ 2,23,032 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ 2,74,129 ವಿದ್ಯಾರ್ಥಿಗಳು ಇದ್ದಾರೆ. ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರಗಳು ಇದ್ದು, ಇದರಲ್ಲಿ 3,275 ಸಾಮಾನ್ಯ ಕೇಂದ್ರಗಳು ಹಾಗೂ 169 ಖಾಸಗಿ ಕೇಂದ್ರಗಳಾಗಿವೆ ಅಂತಾ ತಿಳಿಸಿದರು.