ಬೆಂಗಳೂರು:ಇಂದಿನಿಂದ ರಾಜ್ಯಾದ್ಯಂತಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ. ಮೊದಲನೇ ದಿನವಾದ ಇಂದು ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಪ್ರಥಮ ಭಾಷೆ ವಿಷಯದ ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಲ್ಲಿ ಶೇ.98.48 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆದಿಲ್ಲ. ಯಾವ ವಿದ್ಯಾರ್ಥಿಯನ್ನೂ ಡಿಬಾರ್ ಮಾಡಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.
ಪರೀಕ್ಷಾ ಅಕ್ರಮ ನಡೆದ ಬಗ್ಗೆ ವರದಿಯಾಗಿಲ್ಲ: ಇಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಥಮ ಭಾಷೆಯ ವಿಷಯದ ಮೇಲಿನ ಪರೀಕ್ಷೆ ನಡೆದಿಯಿತು. 125 ಅಂಕಗಳಿಗೆ ನಡೆದ ಪರೀಕ್ಷೆ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಪ್ರಥಮ ಭಾಷೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,27,276 ವಿದ್ಯಾರ್ಥಿಗಳಲ್ಲಿ 8,14,726 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12,550 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೇ.98.48 ರಷ್ಟು ಹಾಜರಾತಿ ಇದ್ದು, ಕಲಬುರಗಿಯಲ್ಲಿ ಕನಿಷ್ಟ ಹಾಜರಾತಿ ದಾಖಲಾಗಿದೆ. ಇಲ್ಲಿ ಶೇ.95.51 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗರಿಷ್ಠ ಹಾಜರಾತಿ ದಾಖಲಾಗಿದ್ದು, ಶೇ.99.55 ರಷ್ಟು ವಿದ್ಯಾರ್ಥಿಗಳ ಹಾಜರಾಗಿದ್ದಾರೆ. ಯಾವುದೇ ರೀತಿಯಲ್ಲೂ ಪರೀಕ್ಷಾ ಅಕ್ರಮ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕೃತ ಮಾಹಿತಿ ನೀಡಿದೆ.
ಇದನ್ನೂ ಓದಿ:ಶಿಕ್ಷಣವಿಲ್ಲ, ಕೆಲಸವೂ ಇಲ್ಲ..: ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯ!