ಬೆಂಗಳೂರು:ಇತ್ತೀಚೆಗೆ ಶ್ರೀಲಂಕಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಪ್ರತಿ ಒಂದು ಗಂಟೆಗೆ ತಪಾಸಣೆ ನಡೆಸಲು ಒಬ್ಬ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇಂದು ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಪ್ರಯಾಣಿಕರ ಬ್ಯಾಗ್ ತಪಾಸಣೆ ಮಾಡಲಾಯಿತು. ಶ್ವಾನ ಪಡೆಯಿಂದ ಬಸ್ ನಿಲ್ದಾಣಗಳಲ್ಲಿ ತಪಾಸಣೆ ನಡೆಯಿತು. ಕೆಎಸ್ಆರ್ಟಿಸಿಯಿಂದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿಗಮದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಹಾಗೂ ಮುನ್ನೆಚ್ಚರಿಕೆ ಕ್ರಮ ವಹಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬಸ್ ನಿಲ್ದಾಣಗಳಲ್ಲಿ ಕಂಡುಬರುವ ಅನುಮಾನಾಸ್ಪದ ವಸ್ತುಗಳು ಮತ್ತು ವಾರಸುದಾರರಿಲ್ಲದ ಲಗೇಜ್ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ತಿಳಿಸಲಾಗಿದೆ. ಪ್ರತಿ ಗಂಟೆಗೊಮ್ಮೆ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಗೆ ಮಾಹಿತಿ ರವಾನಿಸುತ್ತಿರಬೇಕು. 24x7 ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರಬೇಕೆಂದು ಸೂಚಿಸಲಾಗಿದೆ.
ನಿಗಮದ ಬಸ್ ನಿಲ್ದಾಣಗಳಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿ/ವಾರಸುದಾರರಿಲ್ಲದ ವಸ್ತುಗಳು ಹಾಗೂ ಇನ್ಯಾವುದೇ ಅಹಿತಕರ ಘಟನೆಗಳು ಗಮನಕ್ಕೆ ಬಂದಲ್ಲಿ ಕೂಡಲೇ ಸಾರ್ವಜನಿಕರು ಬಸ್ ಪ್ರಯಾಣಿಕರು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿ/ಘಟಕ ವ್ಯವಸ್ಥಾಪಕರು/ ಬಸ್ ನಿಲ್ದಾಣ ನಿಯಂತ್ರಕರು ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.