ಬೆಂಗಳೂರು:ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದ ರಾಜ್ಯದ ಎಂಟು ಜನರ ಮೃತದೇಹಗಳು ಕೊಲಂಬೊದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ.
ನಂತರ ವಿಮಾನ ನಿಲ್ದಾಣದಿಂದ ಮೃತದೇಹಗಳನ್ನು ಮೃತರ ಸ್ವಗ್ರಾಮಗಳಿಗೆ ಜೀರೊ ಟ್ರಾಫಿಕ್ ಮೂಲಕ ತೆಗೆದುಕೊಂಡು ಹೋಗಲಾಯಿತು. ನಿನ್ನೆ ರಾತ್ರಿ ನಾಗರಾಜ್ ರೆಡ್ಡಿ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬರಲಾಗಿತ್ತು. ಇನ್ನು ಇಂದು ಬೆಳಗ್ಗೆ 2 ಗಂಟೆಗೆ 4 ಪಾರ್ಥಿವ ಶರೀರಗಳನ್ನು ಕೆಐಎಎಲ್ಗೆ ತೆಗೆದುಕೊಂಡು ಬರಲಾಗಿತ್ತು. ಇದೀಗ ಮೂರು ಪಾರ್ಥಿವ ಶರೀರಗಳನ್ನು ವಿಮಾನದ ಮೂಲಕ ಕೆಐಎಎಲ್ಗೆ ತೆಗೆದುಕೊಂಡು ಬರಲಾಗಿದೆ.
ತುಮಕೂರು ನಿವಾಸಿ ರಮೇಶ್ ಅಡಕಮಾರನಹಳ್ಳಿ ಮಾರೇಗೌಡ ಮತ್ತು ಹಾರೋ ಕ್ಯಾತನಹಳ್ಳಿ ಪುಟ್ಟರಾಜು ಅವರ ಮೃತದೇಹವನ್ನು ಕೆಐಎಎಲ್ನಿಂದ ಆಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ರವಾನೆ ಮಾಡಲಾಯಿತು.
ಅಂತಿಮ ದರ್ಶನ ಪಡೆದ ಹೆಚ್ಡಿಕೆ ಮತ್ತು ಹೆಚ್ಡಿಡಿ:
ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನೆಲಮಂಗಲದ ಜೆಡಿಎಸ್ ಮುಖಂಡರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಪಡೆದರು.
ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ನೆಲಮಂಗಲದ 7 ಜೆಡಿಎಸ್ ಮುಖಂಡರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ನೆಲಮಂಗಲ ಟೌನ್ ನಿವಾಸಿಗಳಾದ ಲಕ್ಷ್ಮೀನಾರಾಯಣ ಮತ್ತು ಶಿವಕುಮಾರ್ ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನು ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಾಡಲಾಗಿತ್ತು.