ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ನಡೆದ ಅವ್ಯವಹಾರ ಸಂಬಂಧ ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಸಿಐಡಿ ಘೋಷಿಸಿದೆ.
ಪ್ರಕರಣದಲ್ಲಿ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ರಾಮಕೃಷ್ಣಯ್ಯ, ವೇಣುಗೋಪಾಲ್ ಹಾಗೂ ರಾಘವೇಂದ್ರ ನಾಪತ್ತೆಯಾಗಿದ್ದಾರೆ. ಹಲವು ಆಯಾಮಾಗಳಲ್ಲಿ ಸಿಐಡಿ ಪೊಲೀಸರು ಶೋಧ ನಡೆಸಿದರೂ ಎಲ್ಲಿ ಅಡಗಿದ್ದಾರೆ ಎಂಬ ಸುಳಿವು ಲಭ್ಯವಾಗಿಲ್ಲ. ಹೀಗಾಗಿ, ಮೂವರ ಆರೋಪಿಗಳ ಬಗ್ಗೆ ಇರುವಿಕೆ ಮಾಹಿತಿ ನೀಡಿದರೆ ಅಥವಾ ಹುಡುಕಿಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಿಐಡಿ ಪೊಲೀಸರು ಘೋಷಿಸಿದ್ದಾರೆ.
ನಿಗದಿಗಿಂತ ಯಾವುದೇ ದಾಖಲೆ ಇಲ್ಲದೆ ಕೋಟ್ಯಂತರ ರೂಪಾಯಿ ಸಾಲ ನೀಡುವ ಮೂಲಕ ಬ್ಯಾಂಕ್ ದಿವಾಳಿಗೆ ಆರೋಪಿಗಳು ಕಾರಣಕರ್ತರಾಗಿದ್ದರು. ಈ ಸಂಬಂಧ ಆರೋಪಿಗಳ ಹಾಗೂ ಸಾಲ ಪಡೆದವರ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿಯಲ್ಲಿ ಗ್ರಾಹಕರ ಹಣವನ್ನು ಬ್ಯಾಂಕಿನ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 1,400 ಕೋಟಿ ರೂ. ಅವ್ಯವಹಾರ ನಡೆಸಿರುವುದು ಕಂಡುಬಂದಿತ್ತು.