ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆಯ ಇಬ್ಬರು ದಿಗ್ಗಜರ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಬೀಳಗಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಲಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಹೆಸರು ಮಾಡಿರುವ ಜೊತೆಗೆ ಸಕ್ಕರೆ ಕಾರ್ಖಾನೆ ಹೊಂದಿರುವ ಮಾಜಿ ಸಚಿವ ಎಸ್.ಆರ್ ಪಾಟೀಲ್, ನಿರಂತರ 24 ವರ್ಷ ವಿಧಾನಪರಿಷತ್ ಸದಸ್ಯರಾಗಿ ರಾಜಕೀಯ ಕ್ಷೇತ್ರದಲ್ಲಿ ಹಲವು ಹುದ್ದೆಗಳನ್ನು ಅನುಭವಿಸಿದವರು.
ವಿಧಾನಪರಿಷತ್ ಸಭಾ ನಾಯಕರಾಗಿ, ಪ್ರತಿಪಕ್ಷ ನಾಯಕರಾಗಿ ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿಯೂ ಅನುಭವ ಹೊಂದಿದ್ದಾರೆ. ಮೇಲ್ಮನೆ ಸದಸ್ಯರಾಗಿ ಸಾಕಷ್ಟು ಅನುಭವ ಹೊಂದಿರುವ 73 ವರ್ಷದ ಎಸ್.ಆರ್ ಪಾಟೀಲ್ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತವರು ಬೀಳಗಿ ಕ್ಷೇತ್ರದಿಂದಲೇ ಕೆಳಮನೆ ಪ್ರವೇಶದ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ.
ಇವರಿಗೆ ಪ್ರಬಲ ಪ್ರತಿಸ್ಪರ್ಧಿಯನ್ನು ಮತ್ತೋರ್ವ ಕೈಗಾರಿಕೋದ್ಯಮಿ ಹಾಗೂ ಸಕ್ಕರೆ ಉದ್ಯಮದ ಮಾಲೀಕರಾಗಿರುವ ಹಾಗೂ ಹಾಲಿ ಸಚಿವರೂ ಆಗಿರುವ ಮುರುಗೇಶ್ ನಿರಾಣಿ ನೀಡಲಿದ್ದಾರೆ. ಮುಂದಿನ ಅವಧಿಗೂ ಅವರೇ ಬಿಜೆಪಿಯಿಂದ ಅಭ್ಯರ್ಥಿಯಾಗುವುದು ಪಕ್ಕಾ.
2008ರಲ್ಲಿ ಶಾಸಕರಾಗಿ ಅಜಯ್ ಕುಮಾರ್ ನಾಯಕ್ ವಿರುದ್ಧ ಗೆಲುವು ಸಾಧಿಸಿದ್ದ ಮುರುಗೇಶ್ ನಿರಾಣಿ ಅವರು 2013ರಲ್ಲಿ ಮತ್ತೆ ಅವರ ವಿರುದ್ಧವೇ ಸೋಲು ಅನುಭವಿಸಿದ್ದರು. ಚುನಾವಣೆ ಇತಿಹಾಸದಲ್ಲಿಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇಲ್ಲಿ ತೀವ್ರ ಪೈಪೋಟಿ ಎದುರಾಗುತ್ತಾ ಬಂದಿದೆ.
ಇದನ್ನೂ ಓದಿ:ಗೋವಾದಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಮೋದ್ ಸಾವಂತ್ ಆಯ್ಕೆ ಬಹುತೇಕ ಖಚಿತ
ಸವಾಲಾದ ಚುನಾವಣೆ :2004ರಲ್ಲಿ ಜೆಡಿಎಸ್ನ ಮುನಿಯಪ್ಪ ಮುದ್ದಪ್ಪ ಗೆಲುವು ಸಾಧಿಸಿದ್ದನ್ನ ಬಿಟ್ಟರೆ ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇಲ್ಲಿ ನೇರ ಹಣಾಹಣಿ ನಡೆಯುತ್ತಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಮುರುಗೇಶ್ ನಿರಾಣಿ ಜಿ.ಟಿ ಪಾಟೀಲರ ವಿರುದ್ಧ 4,811 ಮತಗಳ ಅಂತರದ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ. ಹಾಲಿ ಸಚಿವರು ಆಗಿರುವ ಪ್ರಭಾವಿ ಬಿಜೆಪಿ ನಾಯಕ ಮುರುಗೇಶ್ ನಿರಾಣಿ ವಿರುದ್ಧ ಮತ್ತೋರ್ವ ಬಾಗಲಕೋಟೆ ದಿಗ್ಗಜ ನಾಯಕ ಎಸ್.ಆರ್ ಪಾಟೀಲ್ ಮುಂದಿನ ಚುನಾವಣೆಯಲ್ಲಿ ಸವಾಲಾಗಿ ನಿಲ್ಲುವ ಸೂಚನೆ ನೀಡಿದ್ದಾರೆ.
ಎಸ್ ಆರ್ ಪಾಟೀಲ್ಗೆ ಟಿಕೆಟ್ ಬಹುತೇಕ ಖಚಿತ :ನಿರಂತರ ನಾಲ್ಕು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ಆಯ್ಕೆಯಾಗುತ್ತಾ ಬಂದಿದ್ದ ಎಸ್ಆರ್ ಪಾಟೀಲ್‌ರಿಗೆ ಈ ಸಾರಿ ಟಿಕೆಟ್ ನೀಡಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಅವರಿಗೆ ಪಕ್ಷ ಪರ್ಯಾಯವಾಗಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ಭರವಸೆ ನೀಡಿದೆ. ಜಿ.ಟಿ ಪಾಟೀಲ್ ಬದಲು ಈ ಸಾರಿ ಎಸ್.ಆರ್ ಪಾಟೀಲ್ಗೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಲಭಿಸುವುದು ಬಹುತೇಕ ಖಚಿತ ಎಂಬ ಮಾತು ಕೇಳಿ ಬರುತ್ತಿದೆ.
ಆದರೆ, ಬಿಜೆಪಿ ಪ್ರಾಬಲ್ಯ ಹೆಚ್ಚಿರುವ ಹಾಗೂ ಮುರುಗೇಶ್ ನಿರಾಣಿ ಪ್ರಭಾವ ಸಾಕಷ್ಟು ಇರುವಂತಹ ಸಂದರ್ಭದಲ್ಲಿ ಸ್ಥಳೀಯರಾಗಿದ್ದರೂ ಎಸ್ಆರ್ ಪಾಟೀಲ್ಗೆ ಇಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಬಹಳ ಕಷ್ಟಕರ ಎಂಬ ಮಾತು ಕೇಳಿ ಬರುತ್ತಿವೆ. ಆದರೂ ವಿಧಾನಪರಿಷತ್ ಸದಸ್ಯರಾಗಿ ಹಾಗೂ ಸಚಿವರಾಗಿ ಈ ಭಾಗದ ಜನರಿಗೆ ಅವರು ನೀಡಿದ ಕೊಡುಗೆ ಹಾಗೂ ಕೃಷ್ಣ ಮೇಲ್ದಂಡೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ನಡೆಸಿದ ಹೋರಾಟಕ್ಕೆ ಸ್ಥಳೀಯ ನಾಗರಿಕರು ಬೆಂಬಲ ಸೂಚಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ:ಸಿನಿಮಾ ಬಿಡುಗಡೆಯ ಮೊದಲ ದಿನದ 100 ಟಿಕೆಟ್ ಕೊಡಿ ಎಂದ ಮೇಯರ್!
ಕಾಂಗ್ರೆಸ್ಗೆ ಸಂಕಷ್ಟ : ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಅಷ್ಟೊಂದು ಸುಲಭವಾಗಿ ಕಾಂಗ್ರೆಸ್ ತೆಕ್ಕೆಗೆ ಸಿಗುವ ಸಾಧ್ಯತೆ ಕಡಿಮೆ ಇದೆ. 2013ರಲ್ಲಿ 27 ಸ್ಥಾನಗಳ ಪೈಕಿ 6 ಸ್ಥಾನವನ್ನು ಗೆದ್ದಿದ್ದ ಕಾಂಗ್ರೆಸ್, 2018ರಲ್ಲಿ ಕೇವಲ ಎರಡು ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಗಿದೆ. ಇನ್ನು 2013ರಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ, ಈ ಸಾರಿ 5 ಸ್ಥಾನವನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ನಿಂದ 4 ಸ್ಥಾನವನ್ನು ಕಿತ್ತುಕೊಂಡಿದೆ.
ಬೇರೆ ಯಾವುದೇ ಪಕ್ಷಗಳು ಇಲ್ಲಿ ಖಾತೆ ತೆರೆದಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ಗೆ ಸಾಕಷ್ಟು ಸಂಕಷ್ಟ ವಿದೆ ಎಂದು ಹೇಳುವುದಕ್ಕೆ ಕಾರಣವೂ ಇದೆ. ರಾಜ್ಯ ಸರ್ಕಾರದಲ್ಲಿ ಖಾಲಿ ಸಚಿವರಾಗಿರುವ ಇಬ್ಬರನ್ನು ಜಿಲ್ಲೆ ಹೊಂದಿದೆ. ಗೋವಿಂದ ಕಾರಜೋಳ ಹಾಗೂ ಮುರುಗೇಶ್ ನಿರಾಣಿ ಪ್ರಭಾವಿ ಖಾತೆಯ ಸಚಿವರಾಗಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧಿಸ್ತಾರಾ?:ಉಳಿದಂತೆ ಸಿದ್ದು ಸವದಿ, ವೀರಣ್ಣ ಚರಂತಿಮಠ ಹಾಗೂ ದೊಡ್ಡನಗೌಡ ಪಾಟೀಲ್ ಶಾಸಕರಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಆನಂದ ನ್ಯಾಮಗೌಡ ಶಾಸಕರಾಗಿದ್ದಾರೆ. ಸಿದ್ದರಾಮಯ್ಯ ಈ ಸಾರಿ ಕ್ಷೇತ್ರ ಬದಲಿಸಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಇನ್ನಷ್ಟು ದುರ್ಬಲವಾಗುವ ಆತಂಕದಲ್ಲೇ ಒಬ್ಬ ಪ್ರಭಾವಿ ಕಾಂಗ್ರೆಸ್ ನಾಯಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಟಿಕೆಟ್ ತಪ್ಪಿರುವ ಹಿನ್ನೆಲೆ ಬೇಸರಗೊಂಡಿರುವ ಎಸ್ಆರ್ ಪಾಟೀಲ್‌ರನ್ನ ಮನವೊಲಿಸಿದರೂ ಕೂಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಶಯವನ್ನು ಈಡೇರಿಸುವ ಭರವಸೆ ನೀಡಲಾಗಿದೆ. ಸಂಧಾನ ಸಂದರ್ಭದಲ್ಲೇ ಎಸ್.ಆರ್ ಪಾಟೀಲ್ ಅವರು ಪ್ರಸ್ತಾಪಿಸಿದ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಕಾಂಗ್ರೆಸ್ನ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.