ಬೆಂಗಳೂರು: ಜನರ ಜೀವ ಉಳಿಸಬೇಕಾದ ರಾಜ್ಯ ಸರ್ಕಾರವೇ ಐಸಿಯುನಲ್ಲಿ ಇದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚಾಮರಾಜನಗರದಲ್ಲಿ ನಡೆದಿರೋ ಘಟನೆ ಅತ್ಯಂತ ಅಮಾನವೀಯ. ಕೊರೊನಾ ಸೋಂಕಿತರ ಜೀವ ಉಳಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರವೇ ಐಸಿಯುನಲ್ಲಿದೆ.
ಕೊರೊನಾ ಸೋಂಕಿತರ ಜೀವ ಉಳಿಸಬೇಕಾದ ಆಕ್ಸಿಜನ್ ಕೊಡದೇ ಅವರನ್ನು ಸರ್ಕಾರವೇ ಬಲಿ ಪಡೆದಿದೆ ಎಂದಿದ್ದಾರೆ. ಚಾಮರಾಜನಗರದಲ್ಲಿ ನಡೆದ ಘಟನೆ ಬಹಿರಂಗವಾಗಿದೆ. ಚಾಮರಾಜನಗರದಲ್ಲಿ ದೊಡ್ಡ ಮಟ್ಟದಲ್ಲಿ ಸಾವುಗಳು ಸಂಭವಿಸಿದೆ. ಇದೇ ರೀತಿಯ ಹಲವು ಘಟನೆಗಳು ರಾಜ್ಯದ ಹಲವು ಜಿಲ್ಲಾಸ್ಪತ್ರೆಗಳಲ್ಲಿ ನಡೆಯುತ್ತಿದೆ.
ಆಕ್ಸಿಜನ್ ಇಲ್ಲದೇ ಪ್ರತಿಯೊಂದು ಜಿಲ್ಲಾಸ್ಪತ್ರೆಯಲ್ಲೂ ದಿನಕ್ಕೆ 4 ರಿಂದ 5 ಸೋಂಕಿತರು ಜೀವ ಬಿಡುತ್ತಿದ್ದಾರೆ. ಚಾಮರಾಜನಗರದ ಘಟನೆ ಬಹಿರಂಗವಾಗಿರೋದ್ರಿಂದ ಇಷ್ಟೆಲ್ಲ ದೊಡ್ಡ ಸುದ್ದಿಯಾಗುತ್ತಿದೆ. ಆದರೆ, ಇದೇ ರೀತಿಯ ಕೆಲವು ಘಟನೆಗಳನ್ನ ಜಿಲ್ಲಾ ಮಟ್ಟದಲ್ಲೇ ಮುಚ್ಚಿಡುವ ಕೆಲಸ ನಡೆಯುತ್ತಿದೆ. ಸಾವುಗಳನ್ನು ಮುಚ್ಚಿಡೋ ಕೆಲಸ ಮಾಡಲಾಗುತ್ತಿದೆ. ಈ ಸರ್ಕಾರವನ್ನು ನಂಬಿದರೆ ಸಾವೇ ಗತಿ ಅನ್ನೋ ಪರಿಸ್ಥಿತಿ ರಾಜ್ಯದಲ್ಲಿದೆ ಎಂದಿದ್ದಾರೆ.