ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಲಸಿಕೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೊನಾ ಲಸಿಕೆಯ ತೀವ್ರ ಅಭಾವವಿದೆ. 45 ವರ್ಷ ಮೇಲ್ಪಟ್ಟವರಿಗಾಗಲೀ, 60 ವರ್ಷ ಮೇಲ್ಪಟ್ಟವರಿಗಾಗಲೀ ವ್ಯಾಕ್ಸಿನ್ ಸಿಗುತ್ತಿಲ್ಲ. ಇಂಥಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ. ಲಸಿಕೆಯ ದಾಸ್ತಾನೇ ಇಲ್ಲದಿರುವಾಗ ಅಭಿಯಾನ ಎನ್ನುವುದೇ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ಮೇ 1 ರಿಂದ 18 ವರ್ಷ ಮೇಲ್ಪಟವರಿಗೆ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಸುಳ್ಳು ಹೇಳಿದೆ. ಕರ್ನಾಟಕದಲ್ಲಿ ಕೇವಲ 3 ರಿಂದ 4 ಲಕ್ಷ ಲಸಿಕೆಯ ದಾಸ್ತಾನಿದೆ. ಲಸಿಕಾ ಕೇಂದ್ರಗಳಿಗೆ 45 ವರ್ಷ ಮೇಲ್ಪಟ್ಟವರು ಬಂದು ಬರಿಗೈಲಿ ವಾಪಸ್ ಆಗುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಲಸಿಕಾ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದ್ದಾರೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಆದೇಶ ಮಾಡಿದೆ ಅನ್ನೋ ಒಂದೇ ಕಾರಣಕ್ಕೆ ಬಿಜೆಪಿ ಸರ್ಕಾರ ಲಸಿಕೆ ಅಭಿಯಾನ ಮಾಡಬೇಕಿತ್ತಾ..? 18 ವರ್ಷ ಮೇಲ್ಪಟ್ಟವರು ಮೇ 3ನೇ ವಾರದವರೆಗೂ ಲಸಿಕಾ ಕೇಂದ್ರಗಳಿಗೆ ಬರಬೇಡಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಲಸಿಕೆ ಅಭಾವವಿಲ್ಲ ಎನ್ನುತ್ತಿದ್ದಾರೆ. ಯಾರನ್ನು ನಂಬುವುದು..? ಎಂದು ಪ್ರಶ್ನಿಸಿದ್ದಾರೆ.