ಬೆಂಗಳೂರು: ಅಮೆರಿಕ ಅಧ್ಯಕ್ಷ ಟ್ರಂಪ್ ಕೊರೊನಾ ಪೀಡಿತರಾಗಿಲ್ಲ ಎನ್ನುವುದು ನನಗೆ ತುಂಬಾ ಸಮಾಧಾನ ತಂದಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ವಿಧಾನ ಪರಿಷತ್ನಲ್ಲಿ ನಿಯಮ 69ರ ಅಡಿ ಮಾತನಾಡಿ, ಭಾರತಕ್ಕೆ ಬಂದ ಸಂದರ್ಭ ಇಲ್ಲಿ ಎಷ್ಟು ಜನರಿಗೆ ಅವರು ಶೇಕ್ ಹ್ಯಾಂಡ್ ಮಾಡಿ ಹೋಗಿದ್ದರು. ಬಂದುಬಿಟ್ಟಿದ್ದರೆ ಏನು ಕತೆ ಅಂದುಕೊಂಡಿದ್ದೆ. ಆದರೆ, ಬಂದಿಲ್ಲ ಎನ್ನುವುದು ಸಮಾಧಾನ ತಂದಿದೆ ಎಂದರು.
ಅಮೆರಿಕ ರಾಷ್ಟ್ರ ಕೊರೊನಾ ಆತಂಕಕ್ಕೆ ಗುರಿಯಾಗಿದ್ದು 5 ಸಾವಿರ ಕೋಟಿ ಡಾಲರ್ ಅಂದರೆ 3.5 ಲಕ್ಷ ಕೋಟಿ ಹಣ ವಿನಿಯೋಗ ಮಾಡಿದೆ. ಅಲ್ಲಿ ತುರ್ತು ಪರಿಸ್ಥಿತಿ ಘೋಷಿತವಾಗಿದೆ. ಆದರೆ, ನಮ್ಮ ರಾಜ್ಯ ಹಾಗೂ ರಾಷ್ಟ್ರದಲ್ಲಿ ಯಾಕೆ ಇಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಇಲ್ಲಿ ಕೂಡ ನಮ್ಮ ಮಾತು ಕೇಳುವ ಸಚಿವರು, ಅಧಿಕಾರಿಗಳು ಇಲ್ಲ. ಕೊವಿಡ್- 19 (ಕೊರೊನಾ) ಅತ್ಯಂತ ಸೂಕ್ಷ್ಮ ಹಾಗೂ ಕಣ್ಣಿಗೆ ಕಾಣದ ಸೂಕ್ಷ್ಮ ವೈರಾಣು ಎಂದ ಅವರು, ಕೊವಿಡ್ -19 ಹರಡುವ ವಿಧಾನ, ಲಕ್ಷಣ, ಭೀಕರತೆ ಕುರಿತು ವಿವರಿಸಿದರು.
ಸಾಂಕ್ರಾಮಿಕ ರೋಗ:ವಿಶ್ವಸಂಸ್ಥೆ ಕೂಡ ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಪ್ರಪಂಚದ 150 ರಾಷ್ಟ್ರದಲ್ಲಿ 1.5 ಲಕ್ಷ ಮಂದಿ ರೋಗಕ್ಕೆ ತುತ್ತಾಗಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೆಗಡಿ ಬಂದಿದ್ರೆ ಎಲ್ಲಿಂದ ಬಂತು ಅಂತ ಅನ್ನಿಸುತ್ತೆ, ಪಕ್ಕದಲ್ಲಿದ್ದವರು ಕೆಮ್ಮಿದರೆ ಎದ್ದು ಹೋಗೋಣ ಅನ್ನಿಸುತ್ತದೆ. ಮೈ ಬಿಸಿಯಾದರೆ, ಸೀನು ಬಂದರೆ ಆತಂಕ ಆಗುತ್ತದೆ. ನಮ್ಮದು ವಿಶ್ವದಲ್ಲೇ ಎರಡನೇ ಅತಿದೊಡ್ಡ ರಾಷ್ಟ್ರ. ಇದರಿಂದ ಈ ದೇಶ ಕೊರೊನಾದ ಮೂರು, ನಾಲ್ಕನೇ ಹಂತಕ್ಕೆ ಹೋಗದಂತೆ ನೋಡಬೇಕು. ಇನ್ನೊಂದು ತಿಂಗಳು ಅತ್ಯಂತ ಮುತುವರ್ಜಿ ವಹಿಸಬೇಕಿದೆ. ದೇಶದ 20 ರಾಜ್ಯದಲ್ಲಿ ಕೊರೊನಾ ಶಂಕಿತರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೊರೊನಾ ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರ ಸಾವಾಗಿದೆ. ಸಾಕಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ 100 ಕ್ಕಿಂತ ಹೆಚ್ಚು ಜನರಿಗೆ ಕೊರೊನಾ ವೈರಸ್ ಪೀಡಿತರಾಗಿರುವ ಶಂಕೆ ಇದೆ. ಇಷ್ಟು ಪೀಡಿತರಲ್ಲಿ ಮೊದಲ ಸಾವು ನಮ್ಮ ರಾಜ್ಯದಲ್ಲಿ ಆಯಿತಲ್ಲಾ ಅನ್ನುವ ಸಂಗತಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದ ಆರೋಗ್ಯ ಇಲಾಖೆ ವಿಚಾರದಲ್ಲಿ ಇದು ಕಪ್ಪು ಚುಕ್ಕೆ ಎಂದರು.
ಕೈ ಕೊಟ್ಟಿದ್ದಕ್ಕೆ ಕೊರೊನಾ ಹುಟ್ಟಿದ್ದು:ಇದು ಹೊಸ ವೈರಾಣು. ಔಷಧ ಕಂಡು ಹಿಡಿದಿಲ್ಲ. ಚೀನಾದಲ್ಲಿ ಹುಟ್ಟಿ ಅಲ್ಲಿಂದ ಬೇರೆಡೆ ತೆರಳಿದವರಿಂದ ಹಬ್ಬಿದೆ. ದೇಶದ ವಿವಿಧ ಗಡಿ ಬಂದ್ ಮಾಡಲಾಗಿದೆ. ದೇಶದ ಪಶ್ಚಿಮ ಬಂಗಾಳ, ಛತ್ತೀಸ್ಗಢ, ಹರಿಯಾಣ ರಾಜ್ಯದಲ್ಲಿ ಕೂಡ ರಾಜ್ಯದ ಮಾದರಿ ವಿವಿಧ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಇಷ್ಟೊಂದು ಸಮಸ್ಯೆ ಆಗಿರುವಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಹೊರ ರಾಷ್ಟ್ರದಿಂದ ಬರುವವರನ್ನು ಕಠಿಣವಾಗಿ ತಪಾಸಣೆಗೆ ವಹಿಸಬೇಕು. ಕೈ ಕೊಟ್ಟಿದ್ದಕ್ಕೆ ಹುಟ್ಟಿದ್ದು ಕೊರೊನಾ, ಕೈ ಕೊಟ್ಟರೆ ಮತ್ತೆ ಹರಡುತ್ತದೆ ಎಂದು ಪಾಟೀಲರು ಹೇಳಿದಾಗ ಎದ್ದುನಿಂತ ಬಿಜೆಪಿ ಸದಸ್ಯ ರವಿಕುಮಾರ್, ಇದು 'ಕೈ'ನಿಂದಲೇ ಬಂದಿದ್ದು ಎಂದರು. ಅದಕ್ಕೆ ತಿರುಗಿ ಹೇಳಿದ ಪಾಟೀಲರು, ಹೌದು ಕೈ ಕೊಟ್ಟಿದ್ದರಿಂದ ಆಗಿದ್ದು. ನಮಗೆ ಹಾಗೂ ಹೊರಟ್ಟಿಯವರಿಗೆ ಕೆಲವರು ಕೈ ಕೊಟ್ಟರು. ಇದರಿಂದ ಚೀನಾದಲ್ಲಿ ಕೊರೊನಾ ಹುಟ್ಟಿತು ಅನ್ನುವ ಅನುಮಾನ ಇದೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲ ಪ್ರಸ್ತಾಪಿಸಿದರು.