ಬೆಂಗಳೂರು: ಸಾವಿರಾರು ಕೋಟಿ ತಂದು ಸ್ಥಿರವಾಗಿರುವ ಒಂದು ಸರ್ಕಾರವನ್ನು ಬೀಳಿಸಿ ಮತ್ತೊಂದು ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಹೋಗಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಪ್ರಸಕ್ತ ಮಧ್ಯಪ್ರದೇಶ ರಾಜಕೀಯ ವಿದ್ಯಮಾನಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಸಮಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ನ ಮಧ್ಯಾಹ್ನದ ಕಲಾಪದಲ್ಲಿ ಭಾರತ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಯಿಂದ ಚುನಾವಣೆಗೆ ಹಣವಂತರು, ಕ್ರಿಮಿನಲ್ ಹಿನ್ನೆಲೆಯವರು, ರಿಯಲ್ ಎಸ್ಟೇಟ್ನಲ್ಲಿ ತೊಡಗಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಹೀಗೆಯೇ ಮುಂದುವರಿದರೆ ಕೋಟ್ಯಾಧಿಪತಿಗಳೇ ಸದನದಲ್ಲಿ ಇರಲಿದ್ದಾರೆ ಎಂದರು.
ಬಡವನ ಮಗ, ಮರ್ಯಾದಸ್ಥ ರಾಜಕಾರಣಕ್ಕೆ ಬಾರದ ಸ್ಥಿತಿ:
ಈ ವೇಳೆ, ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂಇಬ್ರಾಹಿಂ, ಬಡವನ ಮಗ, ಮರ್ಯಾದಸ್ಥ ರಾಜಕಾರಣಕ್ಕೆ ಬಾರದ ಸ್ಥಿತಿ ಇದೆ. ಒಂದು ರೀತಿಯಲ್ಲಿ ರಾಜಕಾರಣಕ್ಕೆ ವೈರಸ್ ಹಿಡಿದಿದೆ. ಇದು ಹೀಗೆಯೇ ಆದರೆ ದೇಶ ಮತ್ತಷ್ಟು ಹಾಳಾಗಲಿದೆ. ಹಿಂದೆ ನಿಜಲಿಂಗಪ್ಪ ಬಳಿ ಸ್ವಂತ ಕಾರು ಇರಲಿಲ್ಲ. ಜನನ್ನಾಥರಾವ್ ಜೋಶಿ ಬಳಿ ಚಿಕಿತ್ಸೆಗೆ ಹಣ ಇರಲಿಲ್ಲ. ಆದರೆ, ಇಂದು ಏನಾಗಿದೆ. ಇದಕ್ಕೆಲ್ಲಾ ನಾವೇ ಕಾರಣ. ಹಿಂದೆ ಭಾಷಣಕ್ಕೆ ಜನರು ಬರುತ್ತಿದ್ದರು. ಆದರೆ ಇಂದು ಜನರನ್ನು ನಾವೇ ತರಬೇಕಿದೆ.ಇದಕ್ಕೆಲ್ಲಾ ಪರಿಹಾರ ಎಂದರೆ ಸಾಕು ಎನ್ನುವ ಭಾವನೆ ಬೇಕಿದೆ ಎಂದರು. ಆಗ ರಾಜಕೀಯ ಎಲ್ಲಾಗಲಿದೆ ರಾಮಕೃಷ್ಣ ಆಶ್ರಮ ಆಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಕಿಚಾಯಿಸಿದರು.
ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ:
ನಂತರ ಮಾತು ಮುಂದುವರೆಸಿದ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆ, ಬಡವರ,ರೈತರ, ಮಹಿಳೆಯರ ಪರ ಎನ್ನುವ ಭರವಸೆ ನೀಡುತ್ತಾರೆ. ಸ್ವರ್ಗವನ್ನೇ ತರುವ ಭರವಸೆ ನೀಡಿರುತ್ತಾರೆ. ಆದರೆ ಅದರಲ್ಲಿ ಈಡೇರಿಕೆ ಆಗುವ ಭರವಸೆ ಇರಲ್ಲ. ಹೀಗಾಗಿ ಬಡ, ಹಿಂದುಳಿದ,ಶೋಷಿತ,ವಿದ್ಯಾರ್ಥಿ, ಹಿಂದುಳಿದ ವರ್ಗದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.