ಬೆಂಗಳೂರು: ಬಡವರ ಆರೋಗ್ಯ ಸುರಕ್ಷತೆಗೆ ಅನುಕೂಲವಾಗಲೆಂದು ಆರ್ಥಿಕ ನೆರವು ನೀಡುವ ಆಯುಷ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದು ಮಧ್ಯಮ ವರ್ಗದ ಜನರಲ್ಲಿ ಆಶಾಕಿರಣ ಮೂಡಿಸಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PMJAY)ಯಿಂದ ಆರ್ಥಿಕವಾಗಿ ದುರ್ಬಲವಿರುವ ಭಾರತೀಯರು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಹಣಕಾಸಿನ ನೆರವು ಪಡೆಯಬಹುದು.
ಆಯುಷ್ಮಾನ್ ಭಾರತ್ ಯೋಜನೆಯ ಅರ್ಹತೆಯು ನಿವಾಸ ಮತ್ತು ಉದ್ಯೋಗದ ಪ್ರದೇಶವನ್ನು ಅವಲಂಬಿಸಿದೆ. ಆಯುಷ್ಮಾನ್ ಭಾರತ್ ಕಾರ್ಡ್ ನಗದುರಹಿತ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಲಾಗಿದೆ. ಸಾಮಾನ್ಯವಾಗಿ ಗಂಭೀರ ಕಾಯಿಲೆಗಳು ಬಂದಾಗ ಬಡಜನರು ಸಾಲ ಮಾಡಿ ಜೀವ ಉಳಿಸುವ ಸಂದರ್ಭ ಹೆಚ್ಚಿರುತ್ತದೆ. ಕೆಲವರು ಉಳಿತಾಯ ಮಾಡಿದ ಹಣವನ್ನೆಲ್ಲಾ ಚಿಕಿತ್ಸೆಗೆ ವೆಚ್ಚ ಮಾಡುತ್ತಾರೆ. ಇನ್ನೂ ಕೆಲವರಿಗೆ ಸಾಲ ಸಿಗದೆ, ಚಿಕಿತ್ಸೆ ಕೊಡಿಸಲಾಗದೆ ಪ್ರಾಣ ಕಳೆದುಕೊಳ್ಳುತ್ತಾರೆ.
ಹೀಗಾಗಿ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ 2018 ರಲ್ಲಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ- ಆಯುಷ್ಮಾನ್ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಿತು. ಈ ಯೋಜನೆಯಡಿ ಅಂದಾಜು 10 ಕೋಟಿಗಿಂತ ಹೆಚ್ಚು ಬಡಕುಟುಂಗಳಿಗೆ ವಾರ್ಷಿಕ 5 ಲಕ್ಷ ರೂ ವರೆಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಕರ್ನಾಟಕದಲ್ಲಿ 2018 ಜೂನ್‌ನಲ್ಲಿ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿದೆ. ಈ ಎರಡು ಯೋಜನೆ ಸಂಯೋಜಿಸಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಎಂಬ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಅರ್ಹರು ಯಾರು?: ಬಿಪಿಎಲ್ ಕುಟಂಬಸ್ಥರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ನೋಂದಾಯಿತ ಫಲಾನುಭವಿಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದ ಕುಟುಂಬಗಳಿಗೆ (ಎಪಿಎಲ್ ಕಾರ್ಡ್ ದಾರರು) ಶೇ.30 ರಷ್ಟು ಚಿಕಿತ್ಸಾ ವೆಚ್ಚವನ್ನು ಸಹ ಪಾವತಿಯ ಆಧಾರದ ಮೇಲೆ ಅಂದರೆ ವಾರ್ಷಿಕ 1.5 ಲಕ್ಷ ರೂ. ಮೊತ್ತದಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಆಯುಷ್ಮಾನ್ ಕಾರ್ಡ್: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಎಬಿ-ಎಆರ್ ಕೆ ಕಾರ್ಡನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ 10 ರೂ. ಶುಲ್ಕದೊಂದಿಗೆ ನೀಡಲಾಗುತ್ತದೆ. ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ 35 ರೂ. ಶುಲ್ಕದೊಂದಿಗೆ ಎಬಿಎಆರ್ ಕೆ ಕಾರ್ಡ್ ನೀಡಲಾಗುತ್ತಿದೆ. ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ನೀಡಿ ಆರೋಗ್ಯ ಕಾರ್ಡ್ ಪಡೆಯಬಹುದು.
ಸರ್ಕಾರಿ ಆಸ್ಪತ್ರೆ , ಉಚಿತ ಚಿಕಿತ್ಸೆ: ಈ ಯೋಜನೆಯಡಿ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೆ ಉತ್ತಮ. ಚಿಕಿತ್ಸೆಗೆ ಈ ಯೋಜನೆಯಡಿ ನಿಗದಿಪಡಿಸಿದ ಪ್ಯಾಕೇಜ್ ದರ ಆ ಸರ್ಕಾರಿ ಆಸ್ಪತ್ರೆಗೆ ದೊರೆಯಲಿದೆ. ಈ ಹಣವನ್ನು ಆಸ್ಪತ್ರೆಯವರು ಸೇವಾ ಸೌಲಭ್ಯ ಹಾಗೂ ಚಿಕಿತ್ಸೆ ನೀಡಿದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ಸಹಕಾರಿಯಾಗುತ್ತದೆ.
ಡಿಜಿಟಲ್ ಮಿಷನ್:ಪ್ರಧಾನಿ ನರೇಂದ್ರ ಮೋದಿ 2021ರ ಸೆಪ್ಟೆಂಬರ್ 27 ರಂದು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಾರಂಭಿಸಿದರು. ಆರೋಗ್ಯ ರಕ್ಷಣೆ ಪ್ರಕ್ರಿಯೆ ಡಿಜಿಟಲೀಕರಣಗೊಳಿಸುವ ಮತ್ತು ಭಾರತದಲ್ಲಿನ ಆರೋಗ್ಯ ಸೌಲಭ್ಯ ಬಲಪಡಿಸಲು ಇದನ್ನು ರಚಿಸಲಾಯಿತು. ಆರೋಗ್ಯ ಐಡಿ ಅಥವಾ ಎಬಿಎಚ್ ಎ ಎಂಬುದು 14 ಅಂಶಗಳ ವಿಶಿಷ್ಟ ಐಡಿ. ಒಬ್ಬ ವ್ಯಕ್ತಿಯು ತನ್ನ / ಅವಳ ವೈದ್ಯಕೀಯ ದಾಖಲೆಗಳನ್ನು ಡಿಜಿಟಲ್‌ನಲ್ಲಿ ಸಂಗ್ರಹಿಸಬಹುದು ಮತ್ತು ಉಳಿಸಬಹುದು. ಹಾಗೂ ಅವುಗಳನ್ನು ವೈದ್ಯರು ಮತ್ತು ಆರೋಗ್ಯ ವಿಮಾ ಕಂಪನಿಗಳೊಂದಿಗೆ ಸುರಕ್ಷಿತವಾಗಿ ಹಂಚಿಕೊಳ್ಳಬಹುದು.