ಬೆಂಗಳೂರು/ಮೈಸೂರು: ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ದಿವ್ಯಾಂಗರಿಗೆ ಕಲ್ಪಿಸಲಾಗಿರುವ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಎರಡನೇ ದಿನವಾದ ಭಾನುವಾರವು (ನಿನ್ನೆ) ಮುಂದುವರೆಯಿತು. ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ವಿಶೇಷ ಮತದಾನದ ಅವಕಾಶವನ್ನು ಕಲ್ಪಿಸಿದೆ.
ಬ್ಯಾಲೆಟ್ ಪೇಪರ್ ಮೂಲಕ ಮಾಡುವ ಮತದಾನದ ಪ್ರಕ್ರಿಯೆ ಏಪ್ರಿಲ್ 29 ರಿಂದ ಪ್ರಾರಂಭವಾಗಿದ್ದು, ಮೇ 6 ರಂದು ಕೊನೆಗೊಳ್ಳಲಿದೆ. ಭಾನುವಾರ ರಾಜ್ಯಾದ್ಯಂತ ಒಟ್ಟು 20,049 ದಿವ್ಯಾಂಗರು ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಇದಕ್ಕಾಗಿ 1,270 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೊದಲ ದಿನವಾದ ಶನಿವಾರ ರಾಜ್ಯದಲ್ಲಿ ಒಟ್ಟು 31,119 ಮಂದಿ ಮತ ಹಾಕಿದ್ದರು.
ಶತಾಯುಷಿಯಿಂದ ಮತದಾನ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಅವರು ನಿನ್ನೆ ತಮ್ಮ ಮನೆಯಿಂದಲೇ ಮತ ಚಲಾಯಿಸಿದರು. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಅತ್ಯಂತ ಹಿರಿಯ ಮತದಾರರೆನಿಸಿರುವ ಇವರು ಭಾರತ ಚುನಾವಣಾ ಆಯೋಗದ ನೂತನ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜವಾಬ್ದಾರಿಯುತ ಪ್ರಜೆಗಳಾಗಿ ದೇಶದ ಪ್ರತಿ ನಾಗರಿಕರೂ ತಪ್ಪದೇ ಮತ ಚಲಾಯಿಸಬೇಕೆಂದು ಅವರು ಇದೇ ವೇಳೆ ಕರೆ ನೀಡಿದರು.
ಚುನಾವಣಾಧಿಕಾರಿ ಮನೋಜ್ ಕುಮಾರ್ ಪ್ರತಿಕ್ರಿಯೆ:ಮತದಾನ ದೇಶದ ಪ್ರತಿ ನಾಗರಿಕನ ಸಂವಿಧಾನಿಕ ಹಕ್ಕು. ಈ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕೆಂಬ ಉದ್ದೇಶದಿಂದ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಯುವ ಮತದಾರರಿಗೆ ಸ್ಫೂರ್ತಿ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.