ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ತಮಗೆ ಹಂಚಿಕೆಯಾಗಿರುವ ಅಧಿಕೃತ ಸರ್ಕಾರಿ ವಸತಿ ಗೃಹವನ್ನು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಪ್ರವೇಶಿಸಿದರು.
ಸಪ್ತ ಸಚಿವರ ನಿವಾಸ (ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್)ನ 6 ನೇ ಸಂಖ್ಯೆಯ ಮನೆಗೆ ಪ್ರವೇಶಿಸಿದ್ದು, ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಕಳೆದ ವಾರ ನಿವಾಸವನ್ನು ತೆರವುಗೊಳಿಸಿದ್ದರು. ಇದಾದ ಬಳಿಕ ಸರ್ಕಾರದಿಂದ ತಮಗೆ ಹಂಚಿಕೆಯಾದ ನಿವಾಸಕ್ಕೆ ಶ್ರೀರಾಮುಲು ಪ್ರವೇಶಿಸಿದ್ದಾರೆ.
ಆರೋಗ್ಯ ಸಚಿವರಿಂದ ಸರ್ಕಾರಿ ನಿವಾಸದ ವಿಶೇಷ ಪೂಜೆ 9.30 ರಿಂದ 10ರ ಸಮಯದಲ್ಲಿ ನಿವಾಸ ಪ್ರವೇಶಿಸಬೇಕಿದ್ದ ಶ್ರೀರಾಮುಲು ಕೊಂಚ ತಡವಾಗಿ ಆಗಮಿಸಿ ಅವಸರವಸರವಾಗಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು. ಈ ಸಂದರ್ಭ ಸಚಿವರ ಆಪ್ತರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.
ಅಚ್ಚರಿ ಮೂಡಿಸಿದ ಬಿಸಿ ಪಾಟೀಲ್
ಶ್ರೀರಾಮುಲು ಸರ್ಕಾರಿ ನಿವಾಸ ಪ್ರವೇಶ ಸಮಾರಂಭಕ್ಕೆ ಆಗಮಿಸುವ ಮೂಲಕ ಹಿರೇಕೆರೂರು ಅನರ್ಹ ಶಾಸಕ ಬಿಸಿ ಪಾಟೀಲ್ ಅಚ್ಚರಿ ಮೂಡಿಸಿದರು. ನಿವಾಸ ಪ್ರವೇಶ ಸಮಯಕ್ಕೆ ಸರಿಯಾಗಿ ಆಗಮಿಸಿ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಸಚಿವರ ಜೊತೆ ಮನೆಯ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು ನಂತರ ಅಲ್ಲಿಂದ ತೆರಳಿದರು.