ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಾರಾಜ್ಯ, ಅಂತರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ಸಾಂಸ್ಥಿಕ ಕ್ವಾರಂಟೈನ್ ಅವಧಿ ಕಡಿಮೆ ಮಾಡಿ ಹೋಂ ಕ್ವಾರಂಟೈನ್ ಅವಧಿ ಹೆಚ್ಚು ಮಾಡಲಾಗಿದೆ.
ಏಳು ದಿನದ ಬಳಿಕ ಶಂಕಿತರು ಮನೆಯಲ್ಲೇ ಉಳಿದುಕೊಳ್ಳುವಂತೆ ನೋಡಲು ಬಿಬಿಎಂಪಿ 460 ತಂಡಗಳನ್ನು ರಚಿಸಿದೆ. ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಗಳು ಇಬ್ಬರು, ಸ್ಥಳೀಯ ಅಧಿಕಾರಿಗಳು ಇರುತ್ತಾರೆ. ಈ ತಂಡಗಳು ಹೋಂ ಕ್ವಾರಂಟೈನ್ನಲ್ಲಿರುವ ಮನೆಗಳಿಗೆ ಭೇಟಿ ನೀಡಿ ಆಗಾಗ ಪರಿಶೀಲನೆ ಹಾಗೂ ಹೆಲ್ತ್ ಚೆಕಪ್ ಮಾಡಲಿದ್ದಾರೆ. ಅಲ್ಲದೆ ಮನೆಯ ಫೋಟೋ ತೆಗೆದು ಕ್ವಾರಂಟೈನ್ ವಾಚ್ ಆ್ಯಪ್ನಲ್ಲಿ ದಾಖಲಿಸಲಾಗುತ್ತದೆ. ಇದರ ಮೇಲುಸ್ತುವಾರಿಯನ್ನು ರೆಸಿಡೆನ್ಸಿ ವೆಲ್ ಫೇರ್ ಅಸೋಸಿಯೇಷನ್ಗಳಿಗೆ ನೀಡಲಾಗಿದೆ.
ಮನೆ ಬಾಗಿಲಿಗೆ ಭಿತ್ತಿ ಪತ್ರ ಅಂಟಿಸಿ, ನೆರೆಹೊರೆಯವರಿಗೆ ಕ್ವಾರಂಟೈನ್ನಲ್ಲಿರುವವರ ಬಗ್ಗೆ ಮಾಹಿತಿ ನೀಡಿ, ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಆ್ಯಪ್ ಹಾಗೂ ಆಪ್ತಮಿತ್ರ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಮಾಡಿ ಹೋಂ ಕ್ವಾರಂಟೈನ್ನಲ್ಲಿ ಇರುವವರನ್ನು ನೋಡಿಕೊಳ್ಳಲಾಗುತ್ತದೆ.