ಕರ್ನಾಟಕ

karnataka

ETV Bharat / state

ಕರ್ನಾಟಕದ ಹೆಸರು ಹೇಗೆ ಬಂತು, ಸೂಚಿಸಿದ್ದು ಯಾರು? ಇದಕ್ಕಿದೆ ಸುದೀರ್ಘ ಇತಿಹಾಸ - ಮಹಾಭಾರತದಲ್ಲಿ ಕರ್ನಾಟಕ ಉಲ್ಲೇಖ

ಕರ್ನಾಟಕ ಹೆಸರು ಹೇಗೆ ಬಂತು, ಸೂಚಿಸಿದ್ದು ಯಾರು, ಕನ್ನಡ ರಾಜ್ಯೋತ್ಸವ ಆಚರಣೆ ಯಾವಾಗಿನಿಂದ ಪ್ರಾರಂಭವಾಯಿತು ಎಂಬ ಇತಿಹಾಸ ಸೇರಿದಂತೆ ಹೀಗೆ ಹತ್ತಾರು ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.. ಈ ಕುರಿತ ಒಂದು ನೋಟ ಇಲ್ಲಿದೆ..

ಕರ್ನಾಟಕಕ್ಕೆ 50ರ ಸಂಭ್ರಮ
ಕರ್ನಾಟಕಕ್ಕೆ 50ರ ಸಂಭ್ರಮ

By ETV Bharat Karnataka Team

Published : Oct 31, 2023, 11:32 AM IST

Updated : Oct 31, 2023, 8:36 PM IST

ಬೆಂಗಳೂರು: ವಿಶಾಲ ಮೈಸೂರು ರಾಜ್ಯ ಕರ್ನಾಟಕವೆನ್ನುವ ಹೆಸರಿನ ಮೂಲಕ ಅಧಿಕೃತವಾಗಿ ಗುರುತಿಸಿಕೊಂಡು ಭರ್ತಿ 50 ವರ್ಷ ತುಂಬಿದೆ. ಪ್ರಾಚೀನ ಕಾಲದಿಂದಲೂ ಕರ್ನಾಟಕ ಹೆಸರಿಗೆ ಹೋಲಿಕೆಯಾಗುವ ಹೆಸರಿನ ಉಲ್ಲೇಖ ಇತಿಹಾಸದ ಪುಟದಲ್ಲಿ ಅಲ್ಲಲ್ಲಿ ಕಾಣಸಿಗುತ್ತಿದ್ದರಿಂದ ಸಾಹಿತಿ ಚದುರಂಗ ಅವರು ಸೂಚಿತ ಕರ್ನಾಟಕ ಎನ್ನುವ ಹೆಸರನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಒಪ್ಪಿಕೊಂಡು ಸಂವಿಧಾನಬದ್ದವಾಗಿಯೇ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣಗೊಳಿಸಿದ್ದರು. ಕನ್ನಡಿಗರ ಕರ್ನಾಟಕಕ್ಕೀಗ ಸುವರ್ಣ ಮಹೋತ್ಸವದ ಪರ್ವ.

ಸಂಗ್ರಹ ಚಿತ್ರ

ಮೈಸೂರು ರಾಜ್ಯ ಉದಯ: 1956ರ ನವೆಂಬರ್ 1 ರಂದು ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಅಂದು, ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾದ ಹಂಪಿಯಲ್ಲಿ ಒಂದು ರೀತಿಯ ಸಂಭ್ರಮಾಚರಣೆ ನಡೆಸಿದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಆದರೆ, ಮೈಸೂರು ರಾಜ್ಯದ ಹೆಸರನ್ನು ಹಳೆ ಮೈಸೂರು ಪ್ರಾಂತ್ಯ ಹೊರತುಪಡಿಸಿ ಇತರ ಭಾಗದ ಕನ್ನಡಿಗರು ಒಪ್ಪಲು ಸಿದ್ಧರಿರಲಿಲ್ಲ. ಇದರ ಪರಿಣಾಮವೇ ಕರ್ನಾಟಕ ಹೆಸರು ರಾಜ್ಯಕ್ಕೆ ಸಿಗುವಂತಾಯಿತು.

ಕರ್ನಾಟಕ ಹೆಸರಿಗಾಗಿ ಹೋರಾಟ:17 ವರ್ಷಗಳ ಕಾಲ ಕರ್ನಾಟಕ ಹೆಸರಿಗಾಗಿ ರಾಜ್ಯದಲ್ಲಿ ಹೋರಾಟವನ್ನು ನಡೆಸಬೇಕಾದ ಸ್ಥಿತಿ ಬಂದಿತು. ಸದನದ ಹೊರಗಡೆಯ ಹೋರಾಟದ ಜೊತೆಗೆ ಸದನದ ಒಳಗಡೆಯೂ ಚರ್ಚೆಗೆ ಜನಪ್ರತಿನಿಧಿ ದೊಡ್ಡಮೇಟಿ ಅಂದಾನಪ್ಪ ಮುನ್ನುಡಿ ಬರೆದಿದ್ದರು. 1956ರ ಡಿಸೆಂಬರ್​ನಲ್ಲಿ ಕರ್ನಾಟಕ ಹೆಸರಿನ ಚರ್ಚೆ ಸುದೀರ್ಘ ಚರ್ಚೆಯಾಯಿತು. ಎರಡು ದಿನ ಚರ್ಚೆ ನಡೆದರೂ ಯಾವುದೇ ಉಪಯೋಗ ಆಗಲಿಲ್ಲ. 1960 ರಲ್ಲಿ ಮತ್ತೊಮ್ಮೆ ಗೊತ್ತುವಳಿ ಮಂಡನೆಯಾದರೂ ಚರ್ಚೆಗೆ ಬರಲಿಲ್ಲ. ಇದಾದ ನಂತರ ಐದಾರು ವರ್ಷಗಳ ಕಾಲ.. ಹತ್ತು ಹಲವು ಬಾರಿ ಸದನದಲ್ಲಿ ನಿಲುವಳಿ ಮಂಡನೆಯಾಗುತ್ತಿತ್ತಾದರೂ ಚರ್ಚಿಸಿ ನಿರ್ಣಯ ಕೈಗೊಳ್ಳುವ ಕೆಲಸ ಮಾತ್ರ ಆಗಲಿಲ್ಲ.

ಹೋರಾಟಕ್ಕೆ ಕವಿ, ಸಾಹಿತಿಗಳಿಂದ ಹೋರಾಟ​: ಆದ್ರೂ ಸಹಿತ ಕನ್ನಡಿಗರ ಹೋರಾಟ ಮಾತ್ರ ಮುಂದುವರಿದಿತ್ತು. ಕವಿಗಳು, ಸಾಹಿತಿಗಳು ಕರ್ನಾಟಕ ಹೆಸರಿನ ಪರ ದನಿ ಎತ್ತಿದರು. ಬಿಎಂ ಶ್ರೀಕಂಠಯ್ಯ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಟಿ.ಎಸ್. ವೆಂಕಣ್ಣಯ್ಯ, ಅ.ನ ಕೃಷ್ಣರಾವ್, ತಿ.ತಾ ಶರ್ಮ, ಕುಲಪುರೋಹಿತ ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಸಾಹಿತಿಗಳು ಶಾಲಾ - ಕಾಲೇಜುಗಳಲ್ಲೂ ಕರ್ನಾಟಕ ಸಂಘ ಹೆಸರಿನಲ್ಲಿ ಸಂಘಗಳನ್ನು ಹುಟ್ಟುಹಾಕಲು ಕಾರಣರಾಗಿ ಮೈಸೂರು ಹಾಗೂ ಕರ್ನಾಟಕ ಎನ್ನುವ ಹೆಸರಿನ ಚರ್ಚೆಯ ಕಾವು ಮತ್ತಷ್ಟು ಹೆಚ್ಚಿಸುವಂತೆ ಮಾಡಿದರು.

ಕರ್ನಾಟಕದ ಸುದೀರ್ಘ ಇತಿಹಾಸ

ಕನ್ನಡಿಗರಿಗೆ ಕೊನೆಗೂ ಸಿಕ್ತು ಫಲ: ವಿಶಾಲ ಮೈಸೂರು ರಾಜ್ಯಕ್ಕೆ ನಿಜಲಿಂಗಪ್ಪ ಮುಖ್ಯಮಂತ್ರಿಯಾದರು. ಅವರ ನಂತರ ಕಡಿದಾಳ್ ಮಂಜಪ್ಪ, ಬಿ.ಡಿ ಜತ್ತಿ, ಎಸ್.ಆರ್. ಕಂಠಿ, ವಿರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರೂ ಮೈಸೂರು ರಾಜ್ಯದ ಹೆಸರು ಬದಲಾಯಿಸಲು ಆಗಲಿಲ್ಲ. ಕನ್ನಡಿಗರ ಆಶಯ ಈಡೇರಲು ದೇವರಾಜ ಅರಸು ಬರಬೇಕಾಯಿತು. 1972ರ ಜುಲೈ 18 ರಂದು ಸಚಿವ ಸಂಪುಟದಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡುವ ನಿರ್ಣಯ ಕೈಗೊಳ್ಳಲಾಯಿತು.

ಸಾಹಿತಿ ಚದುರಂಗರ ಸಲಹೆ:ಮುಖ್ಯಮಂತ್ರಿಯಾಗಿ ನಾಡಿಗೆ ಯಾವ ಕೆಲಸಗಳಿಗೆ ಮೊದಲ ಆದ್ಯತೆಯ ಅಗತ್ಯವಿದೆ ಎಂದು ತಮ್ಮ ಆತ್ಮೀಯರಾಗಿದ್ದ ಸಾಹಿತಿ ಚದುರಂಗ ಅವರ ಜೊತೆ ದೇವರಾಜ ಅರಸು ಚರ್ಚಿಸಿದ್ದರು. ಈ ವೇಳೆ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎನ್ನುವ ಹೆಸರನ್ನು ಇಡುವ ಮೂಲಕ ಕನ್ನಡಿಗರ ಬಯಕೆ ಈಡೇರಿಸಿ ಎನ್ನುವ ಸಲಹೆಯನ್ನು ನೀಡಿ ಆದ್ಯತೆಯ ಮೇಲೆ ಪರಿಗಣಿಸಲು ಮನವಿ ಮಾಡಿದ್ದರು. ಆ ಕಾರಣಕ್ಕಾಗಿಯೇ ಕರ್ನಾಟಕ ಹೆಸರಿಗೆ ಅರಸು ಮೊದಲ ಆದ್ಯತೆ ನೀಡಿ ಸಂಪುಟದಲ್ಲಿ ನಿರ್ಣಯ ಕೈಗೊಂಡರು. ಹಾಗಾಗಿ ಎಷ್ಟೇ ಹೋರಾಟಗಳು ನಡೆದರೂ ಸಾಹಿತಿ ಚದುರಂಗ ಪಾತ್ರವೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣವಾಗಲು ಮುಖ್ಯವಾಗಿದೆ.

ಸದನದಲ್ಲಿ ಕರ್ನಾಟಕ ನಾಮಕರಣದ ನಿರ್ಣಯ ಮಂಡನೆ:ಈ ಎಲ್ಲವುಗಳ ನಡುವೆ 1972ರ ಜುಲೈ 27 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕ ನಾಮಕರಣದ ನಿರ್ಣಯವನ್ನು ಸದನದಲ್ಲಿ ಮಂಡಿಸಿ ಭಾಷಣ ಮಾಡಿದರು. ಈ ನಿರ್ಣಯವನ್ನು ವಿಧಾನಸಭೆ ಅವಿರೋಧವಾಗಿ ಆಂಗೀಕರಿಸಿತು. ವಿಧಾನ ಪರಿಷತ್ ಕೂಡ ಅಂಗೀಕರಿಸಿತು. ನಂತರ 1973 ರ ಜುಲೈ 30 ರಂದು ಲೋಕಸಭೆಯಲ್ಲಿ ಮತ್ತು ಅದೇ ವರ್ಷ ಆಗಸ್ಟ್ 8 ರಂದು ರಾಜ್ಯಸಭೆಯಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ರಾಜ್ಯ ಎಂದು ಬದಲಾಯಿಸುವ ನಿರ್ಣಯಕ್ಕೆ ಅಂಗೀಕಾರ ಸಿಕ್ಕಿತು.

ಪಂಪಾಪತಿ ಹಾಗೂ ಭುವನೇಶ್ವರಿ ದರ್ಶನ: ಅಕ್ಟೋಬರ್ 8 ರಂದು ಅಂದಿನ ರಾಷ್ಟ್ರಪತಿ ವಿವಿ ಗಿರಿ ಅವರು ಕರ್ನಾಟಕದ ಹೆಸರಿಗೆ ಅಧಿಕೃತ ಒಪ್ಪಿಗೆ ನೀಡುವ ಮೂಲಕ ವಿಶಾಲ ಮೈಸೂರು ಕರ್ನಾಟಕ ರಾಜ್ಯ ಎಂದು ಕರೆಸಿಕೊಳ್ಳಲು ಸಮ್ಮತಿಸಿಕೊಂಡಿತು. ನಂತರ 1973ರ ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಸಮ್ಮುಖದಲ್ಲಿ ಪಂಪಾಪತಿ ಹಾಗೂ ಭುವನೇಶ್ವರಿ ದರ್ಶನದ ನಂತರ ಕರ್ನಾಟಕ ರಾಜ್ಯದ ನಕಾಶೆಗೆ ಪೂಜಿಸಿ ಕರ್ನಾಟಕ ಜ್ಯೋತಿ ಬೆಳಗುವ ಮೂಲಕ ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಯಿತು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪ್ರತಿಮೆ

ಅನೇಕ ಚರ್ಚಿತ ಹೆಸರುಗಳು: ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸುವ ಚರ್ಚೆಯ ವೇಳೆ ಇನ್ನಷ್ಟು ಹೆಸರುಗಳು ಪ್ರಸ್ತಾಪಗೊಂಡಿದ್ದವು. ಹಾಲಿ ಇರುವ ಮೈಸೂರು ರಾಜ್ಯವೇ ಇರಬೇಕು ಎನ್ನುವುದರಿಂದ ಆರಂಭಗೊಂಡು ಮೈಸೂರು ಕರ್ನಾಟಕ, ಮೈಸೂರು ಕನ್ನಡನಾಡು, ಕನ್ನಡ ನಾಡು, ಕರ್ಣಾಟಕ, ಕರ್ನಾಟಕ ಎನ್ನುವ ಹೆಸರುಗಳ ಬಗೆಗೆ ಚರ್ಚಿಸಿ ಅಂತಿಮವಾಗಿ ಕರ್ನಾಟಕ ಹೆಸರನ್ನೇ ರಾಜ್ಯಕ್ಕೆ ಇಡುವ ನಿರ್ಣಯ ಕೈಗೊಳ್ಳಲಾಯಿತು. ಸ್ವತಃ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಈ ಎಲ್ಲ ಹೆಸರಿನ ಚರ್ಚೆಗಳ ವಿವರಗಳನ್ನು ಸದನಕ್ಕೆ ನೀಡಿ ಕರ್ನಾಟಕ ಹೆಸರಿಗೆ ಒಪ್ಪಿಗೆ ನೀಡುವಂತೆ ಸದನವನ್ನು ಕೋರಿದ್ದರು.

ಕರ್ನಾಟಕ ಹೆಸರಿನ ಇತಿಹಾಸ: ಚದುರಂಗ ಅವರ ಅಭಿಪ್ರಾಯದಂತೆ ಆಲೂರು ವೆಂಕಟರಾಯರು ಬರೆದ ಕರ್ನಾಟಕ ಗಥ ವೈಭವ ಪುಸ್ತಕದ ಆಧಾರದಲ್ಲಿ ಕರ್ನಾಟಕ ಪದವನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕ ಎಂಬ ಪದ ಕೇವಲ ಹಳೆ ಮೈಸೂರು ಪ್ರಾಂತ್ಯ ಮಾತ್ರವಲ್ಲದೇ ಇಡೀ ಕನ್ನಡ ನಾಡನ್ನು ಸೂಚಿಸುತ್ತದೆ. ಚಾಲುಕ್ಯರು, ರಾಷ್ಟ್ರಕೂಟರು, ಯಾವಾಗಲೂ ತಮ್ಮನ್ನು ಕರ್ನಾಟ ಬಲ ಎಂದು ಕರೆದುಕೊಳ್ಳುತ್ತಿದ್ದರು. ಅಂದರೆ ಕರ್ನಾಟಕದ ಸೈನ್ಯ. ವಿಜಯನಗರ ಸಾಮ್ರಾಜ್ಯದ ಮೂಲ ಹೆಸರು ಕರ್ನಾಟ ಸಾಮ್ರಾಜ್ಯ ಎಂದು ಕರೆದುಕೊಂಡಿದ್ದರು ಎನ್ನುವ ಇತಿಹಾಸದ ಉಲ್ಲೇಖಗಳನ್ನು ಇಲ್ಲಿ ಪರಿಗಣಿಸಲಾಗಿದೆ.

ಕೆಲವು ಆಸಕ್ತಿದಾಯಕ​​​ ಅಂಶಗಳು ಹೀಗಿವೆ:

  1. ಕರ್ನಾಟಕ ಏಕೀಕರಣ ಚಳವಳಿ ಕಾವು ಪಡೆಯುವ ಮುನ್ನವೇ, 'ಕರ್ನಾಟಕ', ಮತ್ತು 'ಕನ್ನಡ' ಪದಗಳನ್ನು ಬಳಕೆ ಮಾಡಲಾಗಿತ್ತು.
  2. ಅತ್ಯಂತ ಖಚಿತವಾಗಿ ಹೇಳಬೇಕು ಎಂದರೆ ಕುವೆಂಪು ಅವರ ಜೈ ಭಾರತ ಜನನಿಯ ತನುಜಾತೆ ಪದ್ಯದ ಎರಡನೇ ಸಾಲಿನಲ್ಲಿ ‘ಕರ್ನಾಟಕ’ ಪದವು ಸ್ಥಾನ ಪಡೆದುಕೊಂಡಿತ್ತು. ಕುವೆಂಪು ಅವರ ಈ ಪದ್ಯವನ್ನು 1924 ರಲ್ಲಿಯೇ ಬರೆದಿದ್ದರು. 2004 ರಲ್ಲಿ ಇದೇ ಪದ್ಯ ರಾಜ್ಯ ಗೀತೆಯನ್ನಾಗಿ ಅಂಗೀಕರಿಸಲಾಯಿತು.
  3. ಅತ್ಯಂತ ಹಳೆಯ ಉಲ್ಲೇಖವು ಸಂಸ್ಕೃತ ಮಹಾಭಾರತದಲ್ಲಿ ಕಂಡುಬರುತ್ತದೆ. ಇದರ ಕಾಲ ಸರಿಸುಮಾರು 6 ನೇ ಶತಮಾನ BC
  4. ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ “ಕರ್ನಾಟ ಎಂಬ ಪದವನ್ನು ಸೈನಿಕರ ಬೆಟಾಲಿಯನ್ ಇರುವ ಸ್ಥಳವನ್ನು ಉಲ್ಲೇಖಿಸಲು ಬಳಸಲಾಗುತ್ತಿತ್ತು
  5. “ತಮಿಳಿನಲ್ಲಿ, ‘ಕರು’ ಎಂದರೆ ಪರ್ವತ ಮತ್ತು ‘ನಾಟು’ ಎಂದರೆ ಹಳ್ಳಿ ಅಥವಾ ಪಟ್ಟಣ. ಹೀಗಾಗಿ, ‘ಕರ್ನಾಟ’ ಎಂಬ ಪದಕ್ಕೆ ‘ಎತ್ತರದ ಭೂಮಿ ಅಥವಾ ಎತ್ತರದ ನೆಲ’ ಎಂಬ ಅರ್ಥವಿರಬಹುದು.
  6. 15 ನೇ ಶತಮಾನದಲ್ಲಿ ಕವಿ ಕುಮಾರ ವ್ಯಾಸನು ಕರ್ಣಾಟ ಭಾರತ ಕಥಾಮಂಜರಿ ರಚಿಸಿದ್ದರು.

ಮಹಾಭಾರತದಲ್ಲಿ ಕರ್ನಾಟಕ ಉಲ್ಲೇಖ: ಕರ್ನಾಟಕ ಎಂಬ ಹೆಸರು ಮಹಾಭಾರತದಲ್ಲಿ ಉಲ್ಲೇಖವಿದೆ. ಕ್ರಿ.ಶ. 450ರಲ್ಲಿ ದಕ್ಷಿಣದಲ್ಲಿ ಆಳಿದ ಗಂಗ ಅರಸರ ಸಾಮ್ರಾಜ್ಯವು ಕರ್ನಾಟಕ ಎಂದೆನಿಸಿತು. 1571ರಲ್ಲಿ ವಿಜಯನಗರ ಸಂಸ್ಥಾನದ ಅರಸರು ಕರ್ನಾಟ ಸಾಮ್ರಾಜ್ಯದ ದೊರೆ ಎಂದು ಕರೆಯಲ್ಪಟ್ಟಿದ್ದಾರೆ. ಅದು ಕನ್ನಡ ಎಂಬ ಶಬ್ಧದಿಂದ ಹುಟ್ಟಿದೆ. ಅದು ಕನ್ನಾಡು ಅಥವಾ ಕನ್ನಡ ನಾಡು ಹಾಗೂ ಕನ್ನಡ ಎಂಬ ಶಬ್ಧವನ್ನು ಸೂಚಿಸುತ್ತದೆ. ಆದ್ದರಿಂದ ಕರ್ನಾಟ ಎಂಬುದನ್ನು ಕರ್ನಾಟಕ ಎಂದು ಕರೆಯುವುದು ರೂಢಿಯಲ್ಲಿದೆ ಎನ್ನುವ ಅಂಶವನ್ನೂ ಪರಿಗಣಿಸಿ ಪ್ರಾಚೀನ ಇತಿಹಾಸವಿರುವ ಕರ್ನಾಟಕವನ್ನೇ ಅಂತಿಮಗೊಳಿಸಲಾಯಿತು.

ಕರ್ನಾಟಕಕ್ಕೆ ಸುವರ್ಣ ಮಹೋತ್ಸವ: ಶತಮಾನಗಳಿಂದಲೂ ಕರ್ನಾಟಕದ ಹೆಸರು ಅಲ್ಲಲ್ಲಿ ಪ್ರಸ್ತಾಪಿತವಾಗಿದ್ದರೂ ಕನ್ನಡ ನಾಡಿಗೆ ಅಧಿಕೃತವಾಗಿ ರಾಜ್ಯದ ಹೆಸರಾಗಿ ಸಂವಿಧಾನ ಬದ್ಧವಾಗಿ ಕರೆಸಿಕೊಂಡು ಸುವರ್ಣ ಕಾಲವಾಗಿದೆ. ಹಾಗಾಗಿ ಈ ವರ್ಷದ ರಾಜ್ಯೋತ್ಸವ ಅತಿ ವೈಶಿಷ್ಟ್ಯಪೂರ್ಣವಾಗಿದೆ.

ಓದಿ:ಕನ್ನಡ ರಾಜ್ಯೋತ್ಸವ: ಕರಾಳ ದಿನ ಆಚರಿಸುತ್ತೇವೆ ಎಂದ ಮಹಾ ಸಿಎಂ.. ಸಂಸದ, ಸಚಿವರಿಗೆ ಬೆಳಗಾವಿ ಪ್ರವೇಶ ನಿರ್ಬಂಧ ಹೇರಿ ಡಿಸಿ ಆದೇಶ

Last Updated : Oct 31, 2023, 8:36 PM IST

ABOUT THE AUTHOR

...view details