ಬೆಂಗಳೂರು:ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಅದರಂತೆ ಅಂತಿಮ ಮತದಾರರ ಪಟ್ಟಿಯನ್ನು ಜ.22ಕ್ಕೆ ಪ್ರಕಟಿಸಲಿದೆ. ಮತದಾರರಿಗೆ ತಮ್ಮ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ವಿವಿಧ ನಮೂನೆಯ ಅರ್ಜಿ ಫಾರಂ ಸಲ್ಲಿಸಲು ಇನ್ನಷ್ಟು ಅವಕಾಶ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಅರ್ಹತಾ ದಿನಾಂಕ 1-1-2024ಕ್ಕೆ 18 ವರ್ಷ ಪೂರ್ಣಗೊಂಡ ಎಲ್ಲಾ ಅರ್ಹ ಮತದಾರರು ನಮೂನೆ-6 ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ, ಭಾವಚಿತ್ರ ತಿದ್ದುಪಡಿಗಾಗಿ ನಮೂನೆ-8 ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಮರಣ ಹೊಂದಿದ ಮನೆಯ ಸಂಬಂಧಿಕರು) ನಮೂನೆ-7 ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ದಿನಾಂಕ 27-12-2023 ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ನಮೂನೆ-6, 7 ಮತ್ತು 8 ರಲ್ಲಿ ಚುನಾವಣಾ ಆಯೋಗವು ಸೂಚಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.