ಬೆಂಗಳೂರು :ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯ ಅರ್ಹತೆಯನ್ನ ಮುಂದಿನ ವರ್ಷ ಜನವರಿ 1, 2022ಕ್ಕೆ ಅನ್ವಯವಾಗುವಂತೆ ನವೆಂಬರ್ 8ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಮತ್ತು ನವೆಂಬರ್ 8ರಿಂದ ಡಿಸೆಂಬರ್ 12ರವರೆಗೆ ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸ್ವೀಕರಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸೂಚಿಸಿದ್ದಾರೆ.
ನವೆಂಬರ್ 7, 14, 21 ಹಾಗೂ 28ರಂದು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು. ಡಿಸೆಂಬರ್ 27ರಂದು ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ ಮಾಡಿ ಜನವರಿ 13ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಈ ವೇಳಾಪಟ್ಟಿಯ ಅನುಸಾರ ಮತದಾರರು ತಮ್ಮ ಹೆಸರು, ವಿಳಾಸ, ಸಂಬಂಧ ಹಾಗೂ ಇತರ ತಿದ್ದುಪಡಿಗಳಿದ್ದಲ್ಲಿ Voter Helpline App ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಹೆಸರು ದಾಖಲಾಗಿರುವ ಬಗ್ಗೆ ಪರಿಶೀಲಿಸಿಕೊಂಡು, ದಾಖಲಾಗದಿದ್ದಲ್ಲಿ ಸೇರ್ಪಡೆ, ತಪ್ಪಾಗಿ ದಾಖಲಾಗಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜೊತೆಗೆ 18 ವರ್ಷ ತುಂಬಿದ ಯುವ ಮತದಾರರು ಮೊಬೈಲ್ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವಂತೆ ಹಾಗೂ ಎಲ್ಲ ಅರ್ಹ ಮತದಾರರು ಈ ಅವಧಿಯಲ್ಲಿ ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದ್ದಾರೆ.