ಬೆಂಗಳೂರು : ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗುವ ಮಾವೋವಾದಿ ಹಾಗೂ ನಕ್ಸಲೀಯರನ್ನು ನಿಯಂತ್ರಣಕ್ಕೆ ತರಲು ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಿಶೇಷ ಪಡೆ ರಚಿಸಿ ಆದೇಶ ಹೊರಡಿಸಿದೆ.
ಅಸ್ಸೋಂ ಮಾವೋವಾದಿ ಹಾಗೂ ನಕ್ಸಲೀಯರ ಕೇಂದ್ರ ಸ್ಥಾನವಾಗಿದ್ದು ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ನಕ್ಸಲೀಯರ ಕಾರಿಡಾರ್ ಪ್ರದೇಶವಾಗಿವೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ವರದಿ ನೀಡಿತ್ತು. ಈ ವರದಿ ಆಧರಿಸಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಿಶೇಷ ತಂಡ ರಚಿಸಿದೆ.
ನಕ್ಸಲ್ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ವಿಶೇಷ ಪಡೆಗಳು ಕಾರ್ಯನಿರ್ವಹಿಸಲಿವೆ. ಇತ್ತೀಚಿನ ವರ್ಷಗಳಲ್ಲಿ ಮಾವೋವಾದಿಗಳು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಾಮಿಸಿದ್ದಾರೆ. ತನ್ನದೇ ಆದ ತತ್ವ- ಸಿದ್ಧಾಂತದ ಆಧಾರದ ಮೇರೆಗೆ ಯುವಕರನ್ನು ಒಗ್ಗೂಡಿಸಿ ಸಂಘಟನಾತ್ಕವಾಗಿ, ಗುಪ್ತವಾಗಿ ಕಾರ್ಯನಿರ್ವಹಿಸಿ ಹಲವು ದಶಕಗಳಿಂದಲೂ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನಕ್ಸಲೈಟ್ ಚಟುವಟಿಕೆ ಗೌಣವಾದರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಚನೆ ಮೇರೆಗೆ ಎಡಪಂಥೀಯರ ದುಷ್ಟ ಕಾರ್ಯಗಳನ್ನ ತಡೆಯುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಪ್ರತ್ಯೇಕ ಕಡೆಗಳಲ್ಲಿ ಕರ್ನಾಟಕ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿಎಫ್) ಒಳಗೊಂಡಂತೆ ನಾಲ್ಕು ವಿಶೇಷ ತಂಡ ರಚಿಸಿದೆ.
ರಾಜ್ಯದ ನಾಲ್ಕು ಕಡೆಗಳಲ್ಲಿ ಸ್ಪೆಷಲ್ ಟೀಮ್ ಕಾರ್ಯನಿರ್ವಹಣೆ :ಮಾವೋವಾದಿ, ನಕ್ಸಲೀಯರ ಚಟುವಟಿಕೆ ಹೆಚ್ವಿರುವ ಹಾಗೂ ಹೆಚ್ಚು ಎಡಪಂಥೀಯರಿರುವ ಪ್ರದೇಶಗಳಲ್ಲಿ ನಾಲ್ಕು ವಿಶೇಷ ತಂಡಗಳು ಕಾರ್ಯಚರಣೆ ಮಾಡಲಿವೆ. ಕೊಡಗಿನ ವಿರಾಜಪೇಟೆ ತಾಲೂಕಿನ ಕುಟ್ಟಾ, ಮಡಿಕೇರಿಯ ಕರಿಕೆ, ಮೈಸೂರು ಎಚ್.ಡಿ.ಕೋಟೆ ಬಳಿ ಬವಾಲಿ ಹಾಗೂ ಚಾಮರಾಜಪೇಟೆ ಗುಂಡ್ಲುಪೇಟೆಯ ಮೂಲೆಹೊಳೆ ಬಳಿ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಪೊಲೀಸ್ ಪಡೆ ಕಾರ್ಯನಿರ್ವಹಿಸಲಿದೆ.
ವಿಶೇಷ ತಂಡದಲ್ಲಿ ಕರ್ತವ್ಯ ನಿರ್ವಹಿಸಲಿದೆ ಡಾಗ್ ಸ್ಕ್ಯಾಡ್ :ಕೇಂದ್ರದ ಅಧಿಸೂಚನೆಯಂತೆ ರಾಜ್ಯ ಸರ್ಕಾರ ವಿಶೇಷ ತಂಡ ಕಾರ್ಯನಿರ್ವಹಿಸಲಿದ್ದು ಒಟ್ಟು 267 ಮಂದಿ ಪೊಲೀಸರನ್ನು ನಿಯೋಜಿಸಿದೆ. ಇಬ್ಬರು ಎಸಿಪಿಗಳು ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಆಪರೇಷನ್ ಟೀಮ್ ಕಮಾಂಡರ್ ಆಗಿ 8 ಮಂದಿ, ಸಹಾಯಕ ಕಮಾಂಡರ್ ಆಗಿ ಪಿಐ ಅಥವಾ ಆರ್ ಎಸ್ಐ, 16 ಪಿಎಸ್ಐ, ಮಹಿಳಾ ಪಿಎಸ್ಐ 1, (ವೈರ್ ಲೇಸ್ ಇನ್ ಚಾರ್ಜ್) 4 ಮಹಿಳಾ ಎಎಸ್ಐ, ಹೆಡ್ ಕಾನ್ ಸ್ಟೇಬಲ್ 40, 120 ಪೊಲೀಸ್ ಕಾನ್ ಸ್ಟೇಬಲ್, ಶ್ವಾನದಳ ಸಿಬ್ಬಂದಿ 16 ಸೇರಿದಂತೆ ವಿವಿಧ ರೀತಿಯ ಸಿಬ್ಬಂದಿ ಸೇರಿ ಒಟ್ಟು 267 ಮಂದಿ ಪೊಲೀಸರನ್ನು ನಿಯೋಜಿಸಿದೆ. ವಿಶೇಷವಾಗಿ ಬೆಲ್ಜಿಯಂ ಶೆಪರ್ಡ್ ಸೇರಿದಂತೆ ವಿವಿಧ ತಳಿ ಶ್ವಾನಗಳಿಗೂ ವಿಶೇಷ ತರಬೇತಿ ನೀಡಲಿದೆ.
ಗಡಿ ಭಾಗದಲ್ಲಿ ಸ್ಪೆಷಲ್ ಟೀಮ್ ಕಾರ್ಯಾಚರಣೆ ಯಾಕೆ ? :ಚಾಮರಾಮನಗರ, ಕೊಡಗು ಹಾಗೂ ಮೈಸೂರಿನಲ್ಲಿ ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆ ನಡೆಸಲಿದೆ. ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೂ ಕರ್ನಾಟಕ ಹತ್ತಿರವಾಗಿದೆ. ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ನುಸುಳುವ ಮಾವೋವಾದಿಗಳು ಯುವಕರ ತಲೆಕೆಡಿಸಿ ತನ್ನು ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ.
ಇಲ್ಲಿನ ಹಿಂಸಾತ್ಮಕ ಚಟುವಟಿಕೆಗಳಿಗೆ ನೆರೆ ರಾಜ್ಯಗಳ ಕಿಡಿಗೇಡಿಗಳು ಕೃತ್ಯವೆಸಗಿರುತ್ತಿರುವುದು ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ನಾಕಾಬಂದಿ ಹಾಕಿ ಗಸ್ತು ಕಾದರೂ ತಮ್ಮ ಚಾಣಾಕ್ಷತನ ಮೆರೆದು ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ಮಟ್ಟ ಹಾಕುವುದಕ್ಕಾಗಿ ವಿಶೇಷ ತಂಡಗಳನ್ನ ರಚಿಸಲಾಗಿದೆ. ಮಾವೋವಾದಿಗಳ ಹಾಗೂ ಎಡಪಂಥೀಯರ ದುಷ್ಟ ಕಾರ್ಯಗಳ ಗಮನ ಕೇಂದ್ರಿಕರಿಸಿ ಈ ತಂಡಗಳು ಕಾರ್ಯಾಚರಣೆ ಹೆಡೆಮುರಿಕಟ್ಟಲಿವೆ.
ಇದನ್ನೂ ಓದಿ :ರಸ್ತೆ ದುರವಸ್ಥೆ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಸುಗೂಸು ಸಾವು ಆರೋಪ.. ಸಿಎಂ ಮುಂದೆ ಕಣ್ಣೀರಿಟ್ಟ ಕುಟುಂಬ