ಬೆಂಗಳೂರು :ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೆಂಗಳೂರಿನಿಂದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ಒಂದು ದಿನದ ವ್ಯವಸ್ಥಿತ ಪ್ರವಾಸವನ್ನು ಪ್ರತಿ ದಿನ ಆಯೋಜಿಸಲು ನಿರ್ಧರಿಸಿದೆ. ದಕ್ಷಿಣ ಕರ್ನಾಟಕ ಪ್ರವಾಸದ ಜೊತೆಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸಲು ಈ ಪ್ಯಾಕೇಜ್ ಮಾಡಿದೆ.
ಈ ಪ್ರವಾಸವು ಬಸ್ ಮೂಲಕ ಪ್ರತಿ ದಿನ ರಾತ್ರಿ 10.00 ಗಂಟೆಗೆ ಆರಂಭಗೊಳ್ಳಲಿದೆ. ನಗರದ ಯಶವಂತಪುರ ಕಚೇರಿಯಿಂದ ಹೊರಟು ಮರು ದಿನ ಬೆಳಗ್ಗೆ 6.00 ಗಂಟೆಗೆ ಉಜಿರೆ ತಲುಪಲಿದೆ.
ಸೂರ್ಯ ಸದಾಶಿವ ದೇವಸ್ಥಾನವನ್ನು ವೀಕ್ಷಿಸಿದ ನಂತರ ಧರ್ಮಸ್ಥಳ ತಲುಪಿ 8.00 ರಿಂದ 11.00 ಗಂಟೆಗೆ ಮಂಜುನಾಥಸ್ವಾಮಿಯ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಮಧ್ಯಾಹ್ನ 12.30 ಕುಕ್ಕೆ ಸುಬ್ರಮಣ್ಯ ತಲುಪಿ ತದ ನಂತರ 3.30ಕ್ಕೆ ಸುಬ್ರಮಣ್ಯದಿಂದ ಹೊರಟು ರಾತ್ರಿ 10.00 ಗಂಟೆಗೆ ರಾಜಧಾನಿಗೆ ತಲುಪಲಿದೆ.
ಓದಿ:ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶ : ಸಚಿವ ಸಿ ಪಿ ಯೋಗೇಶ್ವರ್
ಈ ಪ್ರವಾಸದ ದರವನ್ನು ಪ್ರತಿ ಪ್ರಯಾಣಿಕನಿಗೆ ರೂ.2550/-ನಿಗದಿಪಡಿಸಲಾಗಿದೆ. ಈ ಸೇವೆಯ ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಯಶವಂತಪುರ ಕೇಂದ್ರ ಕಚೇರಿಯ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್ ಹಾಗೂ ರೆಡ್‌ಬಸ್ ಪೋರ್ಟಲ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮುಖಾಂತರ ಮುಂಗಡ ಬುಕಿಂಗ್ ಮಾಡಬಹುದಾಗಿದೆ ಎಂದು ನಿಗಮದ ಅಧ್ಯಕ್ಷೆ ಶೃತಿ ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.