ಬೆಂಗಳೂರು:ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಜನ್ಮತಳೆದ ಭಾರತೀಯ ವಿದ್ಯಾಭವನವು ಕಳೆದ ಹತ್ತು ವರ್ಷಗಳಿಂದ ನಾಡಹಬ್ಬ ದಸರಾವನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ಬೊಂಬೆಗಳ ಮೂಲಕ ರಾಮಾಯಣದ ಕಥೆ ಹೇಳುವ ಪ್ರಯತ್ನವನ್ನು ಮಾಡುತ್ತಿದೆ. ಬೆಂಗಳೂರಿನ ಭಾರತೀಯ ವಿದ್ಯಾಭವನದ ಕೆಆರ್‌ಜಿ ಹಾಲ್‌ನಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ 1.30 ರ ವರೆಗೆ ಮತ್ತು ಮಧ್ಯಾಹ್ನ 3 ರಿಂದ 5.30 ರವರೆಗೆ ಬೊಂಬೆಗಳ ಮೂಲಕ ರಾಮಾಯಣ ಕಥನ ನಿರೂಪಣೆ ಸಾರ್ವಜನಿಕರಿಗೆ ತೆರೆದಿದೆ.
ನವರಾತ್ರಿ ಹಿನ್ನೆಲೆಯಲ್ಲಿ ನಮ್ಮ ಪುರಾಣಗಳು, ಐತಿಹಾಸಿಕ ಘಟನೆಗಳು, ಗ್ರಾಮೀಣ ಪರಿಸರ, ಶಿಕ್ಷಣ ಕ್ರಮ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಬೊಂಬೆಗಳ ಪ್ರದರ್ಶನವನ್ನು ಪ್ರತಿ ವರ್ಷ ಏರ್ಪಡಿಸುತ್ತಿರುವುದು ಜನಮನ್ನಣೆಗಳಿಸಿದೆ. ಈ ವರ್ಷ ಭವ್ಯ ಭಾರತದ ಅತ್ಯುನ್ನತ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಬಿಂಬಿಸುವ ರಾಮಾಯಣ ಮಹಾಕಾವ್ಯ ಕಥನವನ್ನು ಬೊಂಬೆಗಳ ಮೂಲಕ ನಿರೂಪಿಸುವ ಕೆಲಸ ಮಾಡಿದ್ದೇವೆ ಎಂದು ಬೊಂಬೆ ಹಬ್ಬದ ನೇತೃತ್ವ ವಹಿಸಿಕೊಂಡಿರುವ ಭಾರತೀಯ ವಿದ್ಯಾಭವನದ ಸೀತಾ ರಾಮಚಂದ್ರ ಹೇಳಿದರು.
ದಕ್ಷಿಣ ಭಾರತದ ಬೊಂಬೆಗಳನ್ನು ಸಂಗ್ರಹಿಸಿ ತಮ್ಮ ಸ್ವಂತ ಆಸಕ್ತಿ ಮತ್ತು ಪರಿಶ್ರಮಗಳಿಂದ ಪ್ರದರ್ಶನ ನೀಡುತ್ತಿರುವ ಅಪರ್ಣ ಶ್ರೀನಾಥ ಮತ್ತು ಅವರ ಮಗಳಾದ ಮಧುಲಿಕಾ ಶ್ರೀವತ್ ರಾಮಾಯಣ ಕಥನದ ರೂವಾರಿಗಳಾಗಿದ್ದಾರೆ. ಸುಮಾರು 500 ವಿವಿಧ ಬಗೆಯ ಆಕೃತಿಗಳ ಬೊಂಬೆಗಳು ಪ್ರದರ್ಶನದಲ್ಲಿದ್ದು ರಾಮಾಯಣದ ಸೂಕ್ಷ್ಮ ಸಂಗತಿಗಳನ್ನು ಕಣ್ಣ ಮುಂದೆ ತೆರೆದಿಡುತ್ತವೆ. ಜೇಡಿಮಣ್ಣು, ಮರ, ಅರಳೆ, ಬಟ್ಟೆ, ಕಾಗದ ಮುಂತಾದ ಪಾರಂಪರಿಕ ವಸ್ತುಗಳಿಂದ ರೂಪುಗೊಂಡಿರುವ ಈ ಬೊಂಬೆಗಳು ಗತಕಾಲದ ಐತಿಹಾಸಿಕ ವಿವರಗಳನ್ನು ಮಾತ್ರವಲ್ಲದೆ ಸಮಕಾಲೀನ ಬದುಕಿಗೆ ಬೇಕಾದ ಮೌಲ್ಯಗಳನ್ನು ಬಿಂಬಿಸುತ್ತಿವೆ ಎಂದು ಭವನದ ನಿರ್ದೇಶಕ ಮತ್ತು ಅಂತಾರಾಷ್ಟ್ರೀಯ ಕಲಾವಿದ ಹೆಚ್. ಎನ್. ಸುರೇಶ್ ಅಭಿಪ್ರಾಯಪಟ್ಟರು.